ಬುಧವಾರ, ಜೂನ್ 16, 2021
28 °C
ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಸೂಚನೆ

ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರ ನಡೆಸಿ- ಎಸ್‌.ಮುನಿಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಯಂತೆ ನಡೆಸಬೇಕು. ಇಲ್ಲವಾದರೆ ಸೋಂಕು ಹೆಚ್ಚಳವಾಗುವ ಸಾಧ್ಯತೆಯಿದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ರಹಮತ್‌ನಗರ ಹಿಂದೂ ರುದ್ರಭೂಮಿಯಲ್ಲಿನ ಅನಿಲ ಚಿತಾಗಾರವನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು, ಮೃತರ ಅಂತ್ಯಕ್ರಿಯೆಗೆ ಜಾಗದ ಸಮಸ್ಯೆ ಎದುರಾಗಿದೆ. ಹೀಗಾಗಿ ಅನಿಲ ಚಿತಾಗಾರ ಕಾರ್ಯಾರಂಭ ಮಾಡಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಎಲ್ಲೆಂದರಲ್ಲಿ ನಡೆಸುತ್ತಿರುವುದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವವರು ಸುರಕ್ಷತಾ ಕ್ರಮ ಪಾಲಿಸುತ್ತಿಲ್ಲ. ಹೀಗಾಗಿ ಅವರಿಗೆ ಅರಿವಿಲ್ಲದೆ ಸೋಂಕು ಬರುತ್ತಿದೆ. ಆದ ಕಾರಣ ಅಂತ್ಯಕ್ರಿಯೆಯನ್ನು ನಿಯಮಬದ್ಧವಾಗಿ ನಡೆಸಬೇಕು’ ಎಂದು ಸೂಚಿಸಿದರು.

‘ಅನಿಲ ಚಿತಾಗಾರದಲ್ಲಿ 2 ಶವಗಳನ್ನು ಪ್ರಾಯೋಗಿಕವಾಗಿ ಸುಡಲಾಗಿದೆ. ನಗರಸಭೆ ಈ ಚಿತಾಗಾರದ ನಿರ್ವಹಣೆ ಮಾಡಲಿದ್ದು, ಪ್ರತಿ ಅಂತ್ಯಸಂಸ್ಕಾರಕ್ಕೆ ₹ 3,500 ದರ ನಿಗದಿಪಡಿಸಿದೆ. ಒಂದು ಶವ ದಹಿಸಲು ಒಂದು ಗ್ಯಾಸ್‌ ಸಿಲಿಂಡರ್‌ ಬೇಕಾಗುತ್ತದೆ. ಆರ್ಥಿಕ ಸ್ಥಿತಿವಂತರು ಅಂತ್ಯಕ್ರಿಯೆಗೆ ನಿಗದಿತ ಶುಲ್ಕ ಪಾವತಿಸಬೇಕು. ಬಡವರಿಗೆ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ ನಗರಸಭೆಯಿಂದ ಅಥವಾ ಜನಪ್ರತಿನಿಧಿಗಳು ಶುಲ್ಕ ಭರಿಸುತ್ತಾರೆ’ ಎಂದು ಹೇಳಿದರು.

ಶಕ್ತಿಮೀರಿ ಪ್ರಯತ್ನ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಮತ್ತು ಪೊಲೀಸ್‌ ಇಲಾಖೆ ಶಕ್ತಿಮೀರಿ ಪ್ರಯತ್ನ ಮಾಡುತ್ತಿವೆ. ಜನಪ್ರತಿನಿಧಿಗಳು ಸಹ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಆದರೂ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಜಿಲ್ಲೆಯ 3 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಜನರು ಮನೆಗಳಲ್ಲೇ ಇದ್ದು, ಲಾಕ್‌ಡೌನ್‌ಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಹಿಂದೂ ರುದ್ರಭೂಮಿ ಆವರಣವನ್ನು ಸ್ವಚ್ಛ ಮಾಡಿಸಿ ಮತ್ತು ಆವರಣದಲ್ಲಿ ಸಸಿಗಳನ್ನು ನೆಡಿಸಿ. ಶವಸಂಸ್ಕಾರಕ್ಕೆ ಬರುವವರಿಗೆ ನೀರಿನ ವ್ಯವಸ್ಥೆ ಮಾಡಿ’ ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿದರು. ಬಳಿಕ ಆಯುಕ್ತರು ಸ್ಥಳಕ್ಕೆ ಜೆಸಿಬಿ ವಾಹನಗಳನ್ನು ಕರೆಸಿ ಇಡೀ ಆವರಣವನ್ನು ಸ್ವಚ್ಛ ಮಾಡಿಸಿದರು.

ನಗರಸಭೆ ಸದಸ್ಯ ಎಸ್‌.ಆರ್‌.ಮುರಳಿಗೌಡ, ಆಯುಕ್ತ ಆರ್.ಶ್ರೀಕಾಂತ್, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ, ಜಿಲ್ಲಾ ವಕ್ಫ್‌ ಬೋರ್ಡ್ ಅಧ್ಯಕ್ಷ ಜಾಮೀಲ್ ಪಾಷಾ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು