ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಲ್ ಓಮ್ವೆಟ್ ಚಳವಳಿ ಸಂಗಾತಿ: ವಿ.ಎಲ್.ನರಸಿಂಹಮೂರ್ತಿ

Last Updated 20 ಸೆಪ್ಟೆಂಬರ್ 2021, 15:11 IST
ಅಕ್ಷರ ಗಾತ್ರ

ಕೋಲಾರ: ‘ಚಳವಳಿಗಳ ಸಂಗಾತಿ ಗೇಲ್ ಓಮ್ವೆಟ್ ಅವರು ಅಬ್ರಾಹ್ಮಣ ಚಳವಳಿ ಮುನ್ನಡೆಸುವ ಮಹಾದಾಸೆಯೊಂದಿಗೆ ಭಾರತಕ್ಕೆ ಬಂದರು. ಮಹಾರಾಷ್ಟ್ರದಲ್ಲಿ ದಮನಿತ ಸಮುದಾಯಗಳೊಂದಿಗೆ ಬೆರೆತು ಲಾವಣಿ ರಚಿಸುತ್ತಾ ಹಾಡುತ್ತಾ ಚಳವಳಿಗಳ ಸಂಗಾತಿಯಾದರು’ ಎಂದು ಚಿಂತಕ ವಿ.ಎಲ್.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಚಿಂತಕಿ ಗೇಲ್ ಓಮ್ವೆಟ್ ಕುರಿತು ಇಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಮಹತ್ವದ ವ್ಯಕ್ತಿ ಸಂಗತಿಗಳನ್ನು ಟೀಕಿಸಲು ನಾವು ಯೋಗ್ಯರಾಗಿರಬೇಕು. ಅಂತಹ ವಿಮರ್ಶಾತ್ಮಕ ಯೋಗ್ಯತೆ ಗೇಲ್ ಅವರಿಗೆ ಸಿದ್ಧಿಸಿತ್ತು. ಇಂದು ದಮನಿತ ಸಂಘಟನೆಗಳಿಗೆ ಅಂಬೇಡ್ಕರ್ ಅವರ ನಾಮಬಲ ಮಾತ್ರ ಗೊತ್ತಿದೆಯೇ ಹೊರತು ಜ್ಞಾನಬಲ ಗೊತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಹಾತ್ಮ ಗಾಂಧೀಜಿ, ಕಾರ್ಲ್‌ ಮಾರ್ಕ್ಸ್ ಮತ್ತು ಅಂಬೇಡ್ಕರ್ ಭಾರತದ ದಲಿತ ಚಳವಳಿಗೆ ಪ್ರೇರಣೆ ನೀಡಿದ್ದಾರೆ. ಗೇಲ್ ಓಮ್ವೆಟ್ ಅವರು ಇದನ್ನು ಮತ್ತಷ್ಟು ಸ್ಪಷ್ಟಪಡಿಸಿದರು. ಅವರ ಅಧ್ಯಯನ ಸಂಪೂರ್ಣವಾಗಿ ಕ್ಷೇತ್ರ ಕಾರ್ಯವನ್ನು ಆಧರಿಸಿತ್ತು’ ಎಂದಿ ಸಮಾಜ ಶಾಸ್ತ್ರಜ್ಞ ಸಿ.ಜಿ.ಲಕ್ಷ್ಮೀಪತಿ ಹೇಳಿದರು.

‘ಭಾರತೀಯ ಮಹಿಳೆಯರ ಸ್ಥಿತಿಗತಿಯನ್ನು ಕ್ಷೇತ್ರ ಕಾರ್ಯದ ಮೂಲಕ ಅವಲೋಕಿಸಿದ ಗೇಲ್ ಓಮ್ವೆಟ್ ಅವರು ಸಾಮಾಜಿಕ ಪಿತೃ ಪ್ರಧಾನ ಶೋಷಕ ವ್ಯವಸ್ಥೆ ಹಾಗೂ ಕೌಟುಂಬಿಕ ನೈತಿಕ ಶಿಕ್ಷೆ ಎಂಬುದಾಗಿ ಎರಡು ನೆಲೆಯಲ್ಲಿ ಗುರುತಿಸುತ್ತಾರೆ. ಅವರ ಚಿಂತನೆಗಳು ರಂಜನೀಯ ಬೌದ್ಧಿಕತೆಯಿಂದ ಕೂಡಿಲ್ಲ. ಅವರು ಚಿಂತನೆ ಮತ್ತು ಚಳವಳಿನ್ನು ಒಟ್ಟಾಗಿಸಿದ ಸಾವಯವ ಚಿಂತಕರಾಗಿದ್ದರು. ಅಂತಹ ಚಿಂತಕರು ಇಂದು ಅತ್ಯಗತ್ಯ’ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯದರ್ಶಿ ಮಲ್ಲಿಗೆ ಪ್ರತಿಪಾದಿಸಿದರು.

ಸಾಂಸ್ಕೃತಿಕ ಚಳವಳಿಗಾರರು: ‘ಗೇಲ್ ಅವರು ಅಂಬೇಡ್ಕರ್‌ರಂತೆ ಜನಸಾಮಾನ್ಯರ ಜತೆ ಬೆರೆತ ಸುಸಂಸ್ಕೃತ ಸಂಶೋಧಕಿಯಾಗಿದ್ದರು. ನಾವು ಇಂದು ಕೇವಲ ರಾಜಕೀಯಾತ್ಮಕ ಚಳವಳಿಗಾರರಾಗಿದ್ದೇವೆ. ಆದರೆ, ಗೇಲ್‌ರಂತೆ ಸಾಂಸ್ಕೃತಿಕ ಚಳವಳಿಗಾರರು ಆಗಬೇಕು’ ಎಂದು ಸಂಸ್ಕೃತಿ ಚಿಂತಕ ಬಿ.ಶ್ರೀಪಾದಭಟ್ ಆಶಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಮುನಿರತ್ನಪ್ಪ, ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ, ಖಜಾಂಚಿ ಹ.ಮಾ.ರಾಮಚಂದ್ರ, ಸರ್ಕಾರಿ ಮಹಿಳಾ ಕಾಲೇಜು ಉಪನ್ಯಾಸಕ ಶಿವಪ್ಪ ಅರಿವು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT