ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ: ಕೋವಿಡ್‌ ಮಾರ್ಗಸೂಚಿ ಪಾಲಿಸಿ; ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ

ಸರಳವಾಗಿ ಆಚರಿಸಿ: ಆಯೋಜಕರಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ
Last Updated 8 ಸೆಪ್ಟೆಂಬರ್ 2021, 16:40 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಆದೇಶಿಸಿದ್ದಾರೆ.

ಜನರು ದೇವಸ್ಥಾನದೊಳಗೆ, ಮನೆಗಳಲ್ಲಿ ಅಥವಾ ಸರ್ಕಾರಿ, ಖಾಸಗಿ ಸಾರ್ವಜನಿಕ ಬಯಲು ಪ್ರದೇಶದಲ್ಲಿ ಹೆಚ್ಚು ಜನರನ್ನು ಸೇರಿಸದೆ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿಗಿಂತ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಹಾಗೂ ಮನೆಗಳಲ್ಲಿ ಮೂರ್ತಿಗಳು 2 ಅಡಿ ಮೀರಬಾರದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಗಣೇಶೋತ್ಸವಕ್ಕೆ ಗಣೇಶೋತ್ಸವ ಸಮಿತಿಗಳು, ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುನ್ಸಿಪಲ್‌ ಕಾರ್ಪೋರೇಷನ್ ಅಥವಾ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು. ನಗರ ಪ್ರದೇಶದಲ್ಲಿ ವಾರ್ಡ್‌ಗೆ ಒಂದರಂತೆ ಸಾರ್ವಜನಿಕ ಗಣೇಶೋತ್ಸವ ಆಚರಿಸಬೇಕು. ಗರಿಷ್ಠ 5 ದಿನಕ್ಕಿಂತ ಹೆಚ್ಚು ಕಾಲ ಗಣೇಶೋತ್ಸವ ಆಚರಿಸುವಂತಿಲ್ಲ. 20 ಜನಕ್ಕೆ ಸೀಮಿತವಾದ ಆವರಣ ನಿರ್ಮಿಸಬೇಕು. ಹೆಚ್ಚಿನ ಜನ ಸೇರದಂತೆ ಜಾಗೃತಿ ವಹಿಸಬೇಕು ಎಂದು ಸೂಚಿಸಿದ್ದಾರೆ.

ಗಣೇಶೋತ್ಸವ ಆಚರಣೆಯ ಆಯೋಜಕರು ಕೋವಿಡ್- ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಗಣೇಶೋತ್ಸವದ ಸ್ಥಳಗಳಲ್ಲಿ ಸ್ಥಳೀಯ ಮಟ್ಟದ ಕೋವಿಡ್‌ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮೆರವಣಿಗೆಗೆ ನಿಷೇಧ: ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಸಾಂಸ್ಕೃತಿಕ, ಸಂಗೀತ, ನೃತ್ಯ, ಡಿ.ಜೆ ಅಥವಾ ಇತರೆ ಮನರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಗಣೇಶ ಮೂರ್ತಿ ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾರಂಪರಿಕ ಗಣೇಶ ಮೂರ್ತಿ ಮತ್ತು ವಿಗ್ರಹಗಳನ್ನು ಪೂಜಿಸಿ ಮನೆಯಲ್ಲೇ ವಿಸರ್ಜಿಸಬೇಕು. ಸರ್ಕಾರಿ, ಖಾಸಗಿ ಬಯಲು ಪ್ರದೇಶದಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ಕನಿಷ್ಠ ಜನರೊಂದಿಗೆ ಸಮೀಪದ ರಸ್ತೆಗಳನ್ನು ಬಳಸಿಕೊಂಡು ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಿರ್ಮಿಸಲಾದ ಹೊಂಡ, ಮೊಬೈಲ್ ಟ್ಯಾಂಕ್‌ಗಳಲ್ಲಿ ವಿಸರ್ಜಿಸಬೇಕು ಎಂದು ಹೇಳಿದ್ದಾರೆ.

ಗಣೇಶೋತ್ಸವ ಆಚರಿಸುವ ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸ್ಯಾನಿಟೈಸರ್ ನೀಡಬೇಕು ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಭಕ್ತರು ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಜತೆಗೆ ಕಡ್ಡಾಯವಾಗಿ ಮುಖಗವಸು ಧರಿಸಬೇಕು ಎಂದು ತಿಳಿಸಿದ್ದಾರೆ.

ಕಾನೂನು ಕಾಪಾಡಿ: ಗಣೇಶೋತ್ಸವ ಆಚರಣೆ ಸಂಬಂಧ ಸಂದರ್ಭಕ್ಕೆ ಸರ್ಕಾರ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಹೊರಡಿಸುವ ಎಲ್ಲಾ ಆದೇಶಗಳನ್ನು ಆಯೋಜಕರು ಕಡ್ಡಾಯವಾಗಿ ಪಾಲಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಕಾಪಾಡಲು ಪೂರಕವಾಗಿರುವ ಮೊಹರಂ, ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಕಾನೂನು, ಸುವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದ್ದಾರೆ.

ಸೂಚನೆಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಮತ್ತು ಐಪಿಸಿ ಕಲಂ 188ರ ಅನ್ವಯ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT