ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಡುಮಲೆ: ಕಸ ವಿಲೇವಾರಿಯದ್ದೇ ಸಮಸ್ಯೆ, ಗ್ರಾ.ಪಂ. ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

Last Updated 3 ಜೂನ್ 2022, 5:06 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಕುರುಡುಮಲೆ ಗ್ರಾಮದ ವಿನಾಯಕ ದೇವಾಲಯ ಪ್ರಸಿದ್ಧಿ ಪಡೆದಿದೆ. ಸೋಮೇಶ್ವರ ಮತ್ತು ಚನ್ನಕೇಶವ ದೇವಾಲಯಗಳು ಗ್ರಾಮದ ಮೆರುಗನ್ನು ಹೆಚ್ಚಿಸಿವೆ.

ರಾಜ್ಯದ ವಿವಿಧ ಭಾಗಗಳಿಂದಷ್ಟೇ ಅಲ್ಲದೇ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ಭಕ್ತರು ವಿನಾಯಕನ ದರ್ಶನಕ್ಕೆ ಬರುತ್ತಾರೆ. ಚುನಾವಣಾ ಸಮಯದಲ್ಲಿ ರಾಜ್ಯದ ರಾಜಕಾರಣಿಗಳಿಗಿಂತ ನೆರೆಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಜಕಾರಣಿಗಳು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.

ಸಾಕಷ್ಟು ಪ್ರಸಿದ್ಧಿ ಪಡೆದಿರುವ ಕುರುಡುಮಲೆ ಗ್ರಾಮಕ್ಕೆ ಭೇಟಿ ನೀಡಿದ ತಕ್ಷಣ ಕಾಣುವುದು ಕಸದ ರಾಶಿಗಳು. ದೇವಾಲಯದ ದರ್ಶನಕ್ಕೂ ಮೊದಲು ಗ್ರಾಮದಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ಭಕ್ತರಿಗೆ ದರ್ಶನ ನೀಡುತ್ತದೆ. ಇಲ್ಲಿನ ಮುಖ್ಯರಸ್ತೆಯಲ್ಲಿ ಕೋಳಿ ಮಾಂಸ ಮಾರಾಟ ಮಾಡುವ ಸಾಕಷ್ಟು ಅಂಗಡಿಗಳಿವೆ. ಅವುಗಳ ತ್ಯಾಜ್ಯವನ್ನು ರಾಜಾರೋಷವಾಗಿ ರಸ್ತೆ ಬದಿಗೆ ತಂದು ಸುರಿಯಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವವರಿಲ್ಲ.

ಮತ್ತೊಂದೆಡೆ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿ ವ್ಯವಸ್ಥೆಯೂ ಸರಿಯಿಲ್ಲ. ಕಲ್ಮಷ ನೀರು ಒಂದೆಡೆ ಸಂಗ್ರಹಗೊಂಡಿದೆ. ಜೋರಾಗಿ ಮಳೆ ಬಂದರೆ ಚರಂಡಿಯಲ್ಲಿ ನಿಂತ ನೀರು ಹೊರಕ್ಕೆ ಹರಿದು ಹೋಗಲು ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಮಳೆಗಳಿಗೆ ನುಗ್ಗುತ್ತದೆ.

ಗ್ರಾಮದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿ ಕೇಂದ್ರವಾದ ಇಲ್ಲಿ ಇನ್ನೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾಗಿಲ್ಲ. ಹಾಗಾಗಿ, ಕಸ ವಿಲೇವಾರಿ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು.

ಗ್ರಾಮದಲ್ಲಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಸ್ಥಗಿತಗೊಂಡಿದೆ. ಇದರಿಂದ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ನಿತ್ಯವೂ ಪರದಾಡುತ್ತಿದ್ದಾರೆ. ಆದರೂ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರುತ್ತಾರೆ ಮುಖಂಡ ಕೆ.ವಿ. ವಿಜಯಕುಮಾರ್.

ಗ್ರಾಮಸ್ಥ ವೆಂಕಟೇಶಪ್ಪ ಮಾತನಾಡಿ, ‘ಗ್ರಾಮಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ದೇವಾಲಯಕ್ಕೆ ಬರುತ್ತಾರೆ. ಅವರಿಗೆ ಮೊದಲು ಗ್ರಾಮಕ್ಕೆ ಭೇಟಿಯಾದೊಡನೆ ಕಸದ ರಾಶಿಗಳು ಸ್ವಾಗತಿಸುತ್ತವೆ. ಕಸದ ರಾಶಿಗಳ ವಿಲೇವಾರಿಗೆ ಗ್ರಾಮ ಪಂಚಾಯಿತಿ ಆಡಳಿತ ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮದ ರಸ್ತೆ ಬದಿಯಲ್ಲಿ ಕಸ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ರಸ್ತೆಯಲ್ಲಿ ಕಸ ಹಾಕದಂತೆ ಗ್ರಾಮಸ್ಥರಿಗೆ ತಾಕೀತು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕಸ ಸಂಗ್ರಹಣೆಗೆ ಅಗತ್ಯವಾದ ಕಸದ ಡಬ್ಬ ನೀಡಲಾಗುವುದು. ಕುಡಿಯುವ ನೀರು ಪೂರೈಕೆ ಘಟಕದ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು’ ಎಂದುಕುರುಡುಮಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT