ಮಂಗಳವಾರ, ಸೆಪ್ಟೆಂಬರ್ 28, 2021
21 °C
ಸಂಘ ಸಂಸ್ಥೆಗಳು–ಸ್ಥಿತಿವಂತರಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಮನವಿ

ಆರೋಗ್ಯ ಕೇಂದ್ರ ದತ್ತು ಪಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಆರ್ಥಿಕ ಸ್ಥಿತಿವಂತರು ಹಾಗೂ ಸಂಘ ಸಂಸ್ಥೆಗಳು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದತ್ತು ಪಡೆದು ಮಾದರಿ ಆರೋಗ್ಯ ಕೇಂದ್ರಗಳಾಗಿ ರೂಪಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಮನವಿ ಮಾಡಿದರು.

ಇಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೋಲಾರ ರೋಟರಿ ಸಂಸ್ಥೆ ವತಿಯಿಂದ ಕೊಡುಗೆಯಾಗಿ ನೀಡಿದ 12 ಆಮ್ಲಜನಕ ಸಾಂದ್ರಕಗಳು ಹಾಗೂ ವೈದ್ಯಕೀಯ ಸಲಕರಣೆ ಸ್ವೀಕರಿಸಿ ಮಾತನಾಡಿ, ‘ಕೋವಿಡ್ ನಿಯಂತ್ರಣಕ್ಕೆ ರೋಟರಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ದಾನಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 12.50 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿಯಿದ್ದು, ಈಗಾಗಲೇ ಸುಮಾರು 5.50 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. 18 ವರ್ಷ ಮೀರಿದ ಎಲ್ಲರಿಗೂ ಕೋವಿಡ್ ಲಸಿಕೆ ನೀಡಬೇಕು. ಜಿಲ್ಲೆಯಾದ್ಯಂತ ಕೋವಿಡ್ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಲಸಿಕೆ ಹಾಕಿಸಿಕೊಂಡವರು ಸುರಕ್ಷತಾ ಮಾರ್ಗಸೂಚಿ ಪಾಲನೆ ನಿರ್ಲಕ್ಷಿಸಿದರೆ ಕೋವಿಡ್‌ ಬರುವ ಸಾಧ್ಯತೆಯಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಮನೆಯಿಂದ ಹೊರ ಬರುವಾಗ ಮಾಸ್ಕ್‌ ಧರಿಸುವುದು ಮತ್ತು ಕೈಗಳ ಸ್ವಚ್ಛತೆಗೆ ಆಗಾಗ್ಗೆ ಸ್ಯಾನಿಟೈಸರ್‌ ಬಳಕೆ ಮಾಡುವುದನ್ನು ಮುಂದುವರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸಂಸ್ಥೆಯು ಜಿಲ್ಲೆಯಲ್ಲಿ ಹಲವು ಸೇವಾ ಕಾರ್ಯಕ್ರಮ ನಡೆಸುತ್ತಿದೆ. ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ ನೀಡುವ ಗುರಿಯಿತ್ತು. ಆದರೆ, ಕೋವಿಡ್‌ ಕಾರಣಕ್ಕೆ ಈ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ. ಹೀಗಾಗಿ ಈ ಯೋಜನೆ ಮಾರ್ಪಡಿಸಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ಕೋವಿಡ್‌ 3ನೇ ಅಲೆ ನಿಯಂತ್ರಣಕ್ಕೆ ಅಗತ್ಯವಿರುವ ವೈದ್ಯಕೀಯ ಸಲಕರಣೆ ನೀಡಲಾಗುತ್ತಿದೆ’ ಎಂದು ಅಂತರರಾಷ್ಟ್ರೀಯ ರೋಟರಿ ಯೋಜನಾ ಸಂಯೋಜಕ ಟಿ.ಎಸ್.ರಾಮಚಂದ್ರಗೌಡ ವಿವರಿಸಿದರು.

ಜಗತ್ತು ತಲ್ಲಣ: ‘ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೋಟರಿ ಸಂಸ್ಥೆಯು ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆ ನೀಡಿರುವುದು ಶ್ಲಾಘನೀಯ. ಈ ವೈದ್ಯಕೀಯ ಸಲಕರಣೆಗಳನ್ನು ಸದ್ಬಳಕೆ ಮಾಡುತ್ತೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ಹೇಳಿದರು.

‘ಸಂಸ್ಥೆಯಿ ಸುಮಾರು ₹ 15 ಲಕ್ಷ ಮೌಲ್ಯದ 12 ಆಮ್ಲಜನಕ ಸಾಂದ್ರಕಗಳು, 500 ಪಿಪಿಇ ಕಿಟ್‌, 2 ಸಾವಿರ ಬೆಡ್‌ಶೀಟ್‌ ಹಾಗೂ 500 ಲೀಟರ್ ಸ್ಯಾನಿಟೈಜರ್‌ ವಿತರಿಸಲಾಗುತ್ತಿದೆ. ಸಂಸ್ಥೆ ವತಿಯಿಂದ ಮುಂದೆ ಕೊರೊನಾ ವಾರಿಯರ್ಸ್‌ಗಳಿಗೆ ದಿನಸಿ, ಅಗತ್ಯವಿರುವರಿಗೆ ಔಷಧ ಮಾತ್ರೆ ಕಿಟ್‌ ವಿತರಿಸಲಾಗುವುದು’ ಎಂದು ರೋಟರಿ ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಮಾಹಿತಿ ನೀಡಿದರು.

ರೋಟರಿ ಸಂಸ್ಥೆ ಪದಾಧಿಕಾರಿಗಳಾದ ದೇವರಾಜ್, ವೆಂಕಟರವಣಪ್ಪ, ರಾಘವೇಂದ್ರ, ನಾಗಶೇಖರ್, ಶಿವಕುಮಾರ್, ಸಿ.ಆರ್.ಅಶೋಕ್, ಜನಾರ್ದನ್‌, ಎನ್.ನಾಗರಾಜು, ರಾಹುಲ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.