ಗುರುವಾರ , ಮೇ 6, 2021
23 °C

ಸರ್ಕಾರಿ ಶಾಲೆ ನಿರ್ನಾಮಕ್ಕೆ ಹುನ್ನಾರ: ಬಿ.ಸುರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಖಾಸಗಿ ಕಾರ್ಪೊರೇಟ್‌ ಶಿಕ್ಷಣದ ಮೂಲಕ ಸರ್ಕಾರಿ ಶಾಲೆಗಳನ್ನು ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ’ ಎಂದು ನಿರ್ದೇಶಕ ಹಾಗೂ ನಟ ಬಿ.ಸುರೇಶ್ ಕಳವಳ ವ್ಯಕ್ತಪಡಿಸಿದರು.

ವಾರಿಧಿ ಪಬ್ಲಿಕ್ ಶಾಲೆಯು ನಗರದ ಹೊರವಲಯದ ತೇರಹಳ್ಳಿ ಬೆಟ್ಟದ ತಪ್ಪಲಿನ ಬುಡ್ಡಿದೀಪ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬುಡ್ಡಿದೀಪ- ವಾರಿಧಿ ಕಲಾ ಶಾಲೆಗೆ ಚಾಲನೆ ನೀಡಿ ಮಾತನಾಡಿದರು.

‘ಕಾರ್ಪೊರೇಟ್‌ ಶಿಕ್ಷಣ ಪದ್ಧತಿಯಿಂದ ಮಕ್ಕಳ ಮೂಲ ಶಿಕ್ಷಣ ಹಾಳಾಗುತ್ತಿದೆ. ಬುಡ್ಡಿದೀಪ ವಾರಿಧಿ ಕಲಾ ಶಾಲೆಯು ಮುಂದಿನ ಪೀಳಿಗೆಯ ಮಕ್ಕಳಿಗಾಗಿ ನೆಲ ಸಂಸ್ಕೃತಿಯೊಂದಿಗೆ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಮೂಲಕ ಗುಣಾತ್ಮಕ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಈ ನೆಲದಲ್ಲಿ ಜಲ, ಮಾತೃ ಸಂಸ್ಕೃತಿಯೊಂದಿಗೆ ಸಾಮುದಾಯಿಕ ಪ್ರಜ್ಞೆಯಿದೆ. ಮುಂದಿನ ಪೀಳಿಗೆಯು ಲಯ ಸಂಸ್ಕೃತಿಯಿಂದ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಪ್ರಕೃತಿಯ ಮಡಿಲಲ್ಲಿ ಶಿಕ್ಷಣ ಪಡೆಯುವ ಮಕ್ಕಳಲ್ಲಿನ ಪ್ರತಿಭೆ ಹೊರತರುವ ಕೆಲಸಕ್ಕೆ ಕೈ ಹಾಕಿರುವ ಕೋಟಿಗಾನಹಳ್ಳಿ ರಾಮಯ್ಯ ಅವರ ಕನಸು ನನಸಾಗಲಿ’ ಎಂದು ಆಶಿಸಿದರು.

ಶಿಕ್ಷಣ ವಿಫಲ: ‘ದಿಕ್ಕು ದಿಸೆಯಿಲ್ಲದ ಇಂದಿನ ಶಿಕ್ಷಣ ವ್ಯವಸ್ಥೆಯು ಮಕ್ಕಳ ಮೇಲೆ ಭೀಕರ ಪರಿಣಾಮ ಬೀರುತ್ತಿದೆ. ಮಗುವಿನಲ್ಲಿರುವ ಪ್ರತಿಭೆ ಗುರುತಿಸುವಲ್ಲಿ ಈಗಿನ ಶಿಕ್ಷಣ ಪದ್ಧತಿ ವಿಫಲವಾಗಿದೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ವಿಷಾದಿಸಿದರು.

‘ಹೂ ತೋಟಗಳ ಮಧ್ಯ ಶೂನ್ಯ ಶಾಲೆಗಳ ಮೂಲಕ ನನ್ನ ಗುರು ಶ್ರೀರಾಮರೆಡ್ಡಿ ಅವರ ಹೆಸರಿನಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಕಲೆ ಮೂಲಕ ಗುಣಾತ್ಮಕ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತೇವೆ. ಸ್ವೀಡನ್, ಜಪಾನ್‌ ದೇಶಗಳು ತಮ್ಮ ನೆಲೆಗಟ್ಟಿನಲ್ಲಿ ಸಂಸ್ಕೃತಿಯ ಶಿಕ್ಷಣ ನೀಡುತ್ತಿವೆ’ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್, ಉಪ ವಿಭಾಗಾಧಿಕಾರಿ ಸೋಮಶೇಖರ್, ವಾರಿಧಿ ಪಬ್ಲಿಕ್ ಶಾಲೆ ಅಧ್ಯಕ್ಷ ಮಂಜುನಾಥರೆಡ್ಡಿ, ಮುಖ್ಯ ಶಿಕ್ಷಕ ದಿವಾಕರ, ಗ್ರಾಮೀಣ ಮಕ್ಕಳ ಒಕ್ಕೂಟದ ಅಧ್ಯಕ್ಷೆ ಎಂ.ಎಸ್.ಜಯಲಕ್ಷ್ಮಿ, ಉಪನ್ಯಾಸಕ ಜಿ.ಅರಿವು ಶಿವಪ್ಪ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು