ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಮಲ್‌ ಉಳಿಕೆ ಜಾಗ ಸರ್ಕಾರದ ವಶಕ್ಕೆ: ಜಿಲ್ಲಾಧಿಕಾರಿ ಸತ್ಯಭಾಮ

ಕೈಗಾರಿಕೆ ಉದ್ದೇಶಕ್ಕಾಗಿ ಬಳಸಲು ಜಿಲ್ಲಾಡಳಿತ ಕ್ರಮ
Last Updated 5 ನವೆಂಬರ್ 2020, 3:20 IST
ಅಕ್ಷರ ಗಾತ್ರ

ಕೆಜಿಎಫ್‌: ಬೆಮಲ್‌ ಸಂಸ್ಥೆಯ ವಶದಲ್ಲಿರುವ 967 ಎಕರೆ ಜಮೀನನ್ನು ಕಂದಾಯ ಇಲಾಖೆ ಮರಳಿ ಪಡೆದಿದೆ. ಈ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಬಳಸಲು ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.

ನಗರದಲ್ಲಿ ಬುಧವಾರ ಕಂದಾಯ ಅದಾಲತ್‌ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಮಲ್‌ ಕಾರ್ಖಾನೆಗೆ ನೀಡಲಾಗಿದ್ದ ಜಾಗದಲ್ಲಿ ಉಪಯೋಗಿಸದೆ ಇರುವ ಜಮೀನನ್ನು ಕೈಗಾರಿಕೆ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಗಿದೆ ಎಂದರು. ಈ ಸಂಬಂಧವಾಗಿ ಖಾಸಗಿ ಕಂಪನಿಗೆ ಸರ್ವೆ ಮಾಡಿ ವರದಿ ನೀಡಲು ತಿಳಿಸಲಾಗಿದೆ. ಸರ್ವೆ ಕಾರ್ಯ ನಡೆದಿದ್ದು, ಕಾಲಾವಕಾಶ ಕೇಳಿದ್ದಾರೆ ಎಂದು ಅವರು ತಿಳಿಸಿದರು.

ಚಿನ್ನದ ಗಣಿ ಇರುವ ಬಂಗಾರದ ಗಣಿ ಗ್ರಾಮ ಪಹಣಿಯಲ್ಲಿ ನಮೂದಾಗಿಲ್ಲ. ಅದನ್ನು ಸರ್ವೆ ಇಲಾಖೆ ಅಧಿಕಾರಿಗಳ ಸಹಕಾರದಿಂದ ಪಹಣಿಯಲ್ಲಿ ನಮೂದಿಸಲಾಗುವುದು ಎಂದರು.

ಈ ಸಂಬಂಧವಾಗಿ ಪರಿಶೀಲನೆ ನಡೆಸಲು ಕಂದಾಯ ಕಾರ್ಯದರ್ಶಿಗಳು ಶನಿವಾರ ಕೋಲಾರಕ್ಕೆ ಬರಲಿದ್ದಾರೆ. ಈ ಪ್ರದೇಶದಲ್ಲಿ ಯಾರಾದರೂ ಒತ್ತುವರಿ ಮಾಡಿಕೊಂಡಿದ್ದಲ್ಲಿ ಕಾನೂನು ಪ್ರಕಾರ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಿಗೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ನೀಡಲಾಗಿದೆ. ಅವಶ್ಯ ಇರುವ ಕಡೆ ಸ್ಮಶಾನಕ್ಕೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿಕೊಡಲಾಗಿದೆ. ಅಶೋಕನಗರ ರಸ್ತೆ ವಿಸ್ತರಣೆಗೆ ಚಾಲನೆ ನೀಡಲಾಗಿದೆ ಎಂದರು.

ಈಗ ನಡೆಯುತ್ತಿರುವ ಕಂದಾಯ ಮತ್ತು ಪಿಂಚಣಿ ಅದಾಲತ್‌ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.

ಶ್ರೀನಿವಾಸಪುರದಲ್ಲಿ 600ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಟೇಕಲ್‌ನಲ್ಲಿ ಸ್ಪಂದನೆ ಚೆನ್ನಾಗಿತ್ತು. ಕೊರೊನಾದಂತಹ ಸಮಯದಲ್ಲಿ ಕೂಡ ಕಂದಾಯ ಅಧಿಕಾರಿಗಳು ದಾಖಲೆಗಳನ್ನು ಒಟ್ಟು ಮಾಡಿ, ಫಲಾನುಭವಿಗಳನ್ನು ಭೇಟಿ ಮಾಡಿ ದಾಖಲೆಗಳನ್ನು ಮಾಡಿಕೊಡುವ ಕೆಲಸ ಮಾಡಿದ್ದಾರೆ ಎಂದರು.

ಕಂದಾಯ ಅದಾಲತ್‌ನಲ್ಲಿಶೇ 90ಕ್ಕೂ ಹೆಚ್ಚು ಯಶಸ್ಸು ಸಿಗುತ್ತಿದೆ. ಭೂಮಿ ಮಂಜೂರು ಮಾಡುವ ಬಗ್ಗೆ ಎಲ್ಲೆಡೆ ದಾಖಲೆಗಳನ್ನು ಒಟ್ಟುಗೂಡಿಸುವ ಕೆಲಸ ಆಗುತ್ತಿದೆ. ಯಾರಿಗೆ ಮಂಜೂರು ಮಾಡಬೇಕು ಎಂಬುದರ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಇಲ್ಲವೇ ಉಪ ವಿಭಾಗಾಧಿಕಾರಿ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.

ರಾಬರ್ಟ್‌ಸನ್‌ಪೇಟೆ ಹೋಬಳಿಗೆ ಸಂಬಂಧಿಸಿದಂತೆ 140 ಖಾತೆಗಳನ್ನು ಮಾಡಲಾಗಿದೆ. 40 ಪಿಂಚಣಿ ಯೋಜನೆ
ಯನ್ನು ಮಂಜೂರು ಮಾಡಲಾಗಿದೆ. ಪಿಂಚಣಿಗೆ ಅರ್ಹರಾದವರಿಗೆ ಮನೆ ಬಾಗಿಲಿಗೆ ದಾಖಲೆಗಳನ್ನು ಒದಗಿಸ
ಲಾಗುತ್ತದೆ. ಹಲವಾರು ಯೋಜನೆಗಳ ದಾಖಲೆಗಳನ್ನು ಜನಪ್ರತಿನಿಧಿಗಳ ಮೂಲಕ ನೀಡಲಾಗುತ್ತದೆ ಎಂದು ಹೇಳಿದರು.

ಬಂಗಾರಪೇಟೆ– ಕೆಜಿಎಫ್ ನಡುವಿನ ರಸ್ತೆ ತೀರಾ ಹಳ್ಳಗಳಿಂದ ಕೂಡಿದೆ. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಉಪ ವಿಭಾಗಾಧಿಕಾರಿ ಸಿ.ಸೋಮಶೇಖರ್, ತಹಶೀಲ್ದಾರ್ ಕೆ.ರಮೇಶ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುನಿಲ್‌, ಪೌರಾಯುಕ್ತೆ ಸರ್ವರ್ ಮರ್ಚೆಂಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT