ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಮಲ್‌ ಉಳಿಕೆ ಜಾಗ ಸರ್ಕಾರದ ವಶಕ್ಕೆ: ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ

Last Updated 27 ಆಗಸ್ಟ್ 2020, 16:22 IST
ಅಕ್ಷರ ಗಾತ್ರ

ಕೆಜಿಎಫ್‌: ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಉದ್ಯಮ ಬೆಮಲ್‌ಗೆ ನೀಡಿದ್ದ 973 ಎಕರೆ ಪ್ರದೇಶವನ್ನು ಮರಳಿ ಪಡೆಯಲಿದ್ದು, ಅಲ್ಲಿ ಕೈಗಾರಿಕೆ ಸ್ಥಾಪನೆಗೆ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.

ನಗರದ ಬೆಮಲ್‌, ಅಜ್ಜಪಲ್ಲಿ ಮೊದಲಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಅವರು, ಬೆಮಲ್ ಅಧಿಕಾರಿಗಳ ಜೊತೆ ಮಾತನಾಡಿದರು.

ಬೆಮಲ್‌ ಸಂಸ್ಥೆಗಾಗಿ ರಾಜ್ಯ ಸರ್ಕಾರ ಭೂಮಿ ನೀಡಿತ್ತು. ಅದನ್ನು ಅವರು ಉಪಯೋಗಿಸಿಕೊಳ್ಳಲಿಲ್ಲ. ಉದ್ದೇಶಿತ ಯೋಜನೆಗೆ ಭೂಮಿಯನ್ನು ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ ಅದನ್ನು ಮರಳಿ ಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಈ ನಿಟ್ಟಿನಲ್ಲಿ ಉಳಿಕೆ ಜಮೀನನ್ನು ಮರಳಿ ಸರ್ಕಾರದ ವಶಕ್ಕೆ ನೀಡಲಾಗುವುದು ಎಂದರು.

ಜಾಗ ಗುರುತಿಸುವಿಕೆಗಾಗಿ ಖಾಸಗಿ ಸಂಸ್ಥೆಯನ್ನು ನೇಮಕ ಮಾಡಲಾಗಿದೆ. ಜಾಗದ ಆರ್‌ಟಿಸಿ ಮತ್ತು ಎಂಆರ್ ಸಿದ್ಧಪಡಿಸಲಾಗುವುದು. ನಂತರ ರಾಜ್ಯ ಸರ್ಕಾರ ಯಾವ ರೀತಿಯ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂದು ನಿರ್ಧರಿಸುತ್ತದೆ. ಈ ಪ್ರದೇಶದ ಬಳಿಯಲ್ಲಿಯೇ ಚೆನ್ನೈ ಕಾರಿಡಾರ್ ರಸ್ತೆ ಹಾದು ಹೋಗುತ್ತದೆ. ನೆರೆಯ ಕುಪ್ಪಂಗೆ ಇದು ಹತ್ತಿರದ ಪ್ರದೇಶವಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ 117 ಕಿ.ಮೀ ದೂರವಿದೆ. ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಇಂದು ಬೆಂಗಳೂರು ಸುತ್ತಮುತ್ತ ಜಾಗ ಸಿಗುತ್ತಿಲ್ಲ. ಭೂಮಿ ಬೆಲೆ, ಕೈಗಾರಿಕೆ ಸ್ಥಾಪನೆಗಿಂತ ಹೆಚ್ಚಿದೆ. ಹಾಗಾಗಿ ಎಲ್ಲ ರೀತಿಯ ಸೌಕರ್ಯವಿರುವ ಇಂತಹ ಪ್ರದೇಶಗಳಲ್ಲಿ ಕೈಗಾರಿಕೆಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಕೈಗಾರಿಕೆಗಳಿಗೆ ನೀರಿನ ಸೌಲಭ್ಯ ಅಗತ್ಯ. ಕೆಸಿ ವ್ಯಾಲಿ ನೀರು ಈ ಭಾಗಕ್ಕೆ ಬಂದ ನಂತರ ನೀರಿನ ಸಮಸ್ಯೆಯೂ ಬಗೆಹರಿಯುತ್ತದೆ. ನೀರಿನ ಅವಶ್ಯಕತೆ ಕಡಿಮೆ ಇರುವ ಕೈಗಾರಿಕೆಗಳಿಗೆ ಉತ್ತೇಜನ ನೀಡಬಹುದು ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯದ ಕೈಗಾರಿಕೆ ಸ್ಥಾಪನೆ ಬಗ್ಗೆ ಶುಕ್ರವಾರ ರಾಜ್ಯ ಸರ್ಕಾರದೊಡನೆ ಸಮಾಲೋಚನೆ ನಡೆಸಲಿದ್ದಾರೆ. ಇದಕ್ಕೆ ಪೂರಕವಾಗಿ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ಸತ್ಯಭಾಮ ತಿಳಿಸಿದರು.

ತಹಶೀಲ್ದಾರ್ ಕೆ.ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT