ಮಂಗಳವಾರ, ಸೆಪ್ಟೆಂಬರ್ 21, 2021
21 °C
ಸರ್ವೆ ನಂಬರ್‌ 64ರಲ್ಲಿರುವ ಗೌಡನ ಕೆರೆ 11.17 ಎಕರೆ ವಿಸ್ತೀರ್ಣ

ಕೆಜಿಎಫ್‌: ಗೌಡನ ಕೆರೆ ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್ ಗೌತಮನಗರದ ಬಳಿಯ ಮಸ್ಕಂ ಗೌಡನ ಕೆರೆಯನ್ನು ಬುಧವಾರ ತೆರವುಗೊಳಿಸಲಾಯಿತು

ಕೆಜಿಎಫ್‌: ದಶಕದಿಂದ ಒತ್ತುವರಿಯಾಗಿದ್ದ ಗೌತಮನಗರ ಬಳಿಯ ಗೌಡನ ಕೆರೆಯನ್ನು ಬುಧವಾರ ವಿವಿಧ ಇಲಾಖೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಯಿತು.

ಸರ್ವೆ ನಂಬರ್‌ 64ರಲ್ಲಿರುವ ಗೌಡನ ಕೆರೆ 11.17 ಎಕರೆ ವಿಸ್ತೀರ್ಣವಿದ್ದು, ಸ್ವಲ್ಪ ಭಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿತ್ತು. ಅಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕಟ್ಟಲಾಗಿತ್ತು. ಉಳಿದ ಜಾಗವನ್ನು ಭೂ ಮಾಫಿಯಾಗಳು ಒತ್ತುವರಿ ಮಾಡಿಕೊಂಡಿದ್ದವು. ಕೆರೆಯಲ್ಲಿ ರಸ್ತೆ ಕೂಡ ನಿರ್ಮಿಸಲಾಗಿತ್ತು. ನಗರಸಭೆಯಿಂದ ಕೂಡ ರಸ್ತೆ, ಚರಂಡಿ ಮತ್ತು ಸೇತುವೆ ನಿರ್ಮಾಣ ಮಾಡಲಾಗಿತ್ತು. ಒಟ್ಟು 5.17 ಎಕರೆ ಜಮೀನು ಒತ್ತುವರಿಯಾಗಿತ್ತು.

ಕೆರೆಯ ಕಟ್ಟೆ ಒಡೆದು, ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಸ್ಕಂ ಮತ್ತು ಸುತ್ತಲಿನ ಪ್ರದೇಶಗಳ ಜನರು ಸರ್ಕಾರಕ್ಕೆ ಮನವಿ ಮಾಡಿದ್ದರು.

ಸೋಮವಾರ ಕೆರೆಯ ಸರ್ವೇ ಮಾಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಕೆರೆ ಒತ್ತುವರಿಯಾಗಿರುವ ಪ್ರದೇಶ ಗುರುತು ಹಾಕಿದರು. ಕೆರೆಯ ಒಡೆತನ ಹೊಂದಿರುವ ಜಿಲ್ಲಾ ಪಂಚಾಯತಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಕೆರೆಯ ನಕ್ಷೆ ನೀಡಿದರು. ತಹಶೀಲ್ದಾರ್ ಕೆ.ರಮೇಶ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶೇಷಾದ್ರಿ, ಕೆಜಿಎಫ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಹೀರ್ ಅಬ್ಬಾಸ್‌, ಸಹಾಯಕ ಎಂಜಿನಿಯರ್‌ ಶ್ರೀನಿವಾಸ್‌, ರವಿಚಂದ್ರ ಹಾಗೂ ನಗರಸಭೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.

ಕೆರೆಯ ಪೂರ್ವ ದಿಕ್ಕಿನಲ್ಲಿ ಖಾಸಗಿ ಬಡಾವಣೆಗೆ ಹೋಗುವ ದಾರಿಯನ್ನು ಹಳ್ಳ ತೋಡಿ ಅಧಿಕಾರಿಗಳು ಮುಚ್ಚಿಸಿದರು. ಉತ್ತರ ದಿಕ್ಕಿನಲ್ಲಿರುವ ಡಾಂಬರು ರಸ್ತೆಯನ್ನು ಅಗೆದು ಸಂಪರ್ಕ ಕಡಿತಗೊಳಿಸಲಾಯಿತು. ಗೌಡನ ಕೆರೆ ಜಿಲ್ಲಾ ಪಂಚಾಯತಿ ಇಲಾಖೆಗೆ ಸೇರಿದೆ. ಈ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಕಂದಾಯ ಅಧಿಕಾರಿಗಳು ಸರ್ವೆ ಮಾಡಿ ಜಾಗ ಗುರುತು ಮಾಡಿಕೊಟ್ಟ ನಂತರ ಕೆರೆಯ ನಕ್ಷೆಯನ್ನು ಗುರುತು ಹಾಕಲಾಗುತ್ತಿದೆ. ನಂತರದ ದಿನಗಳಲ್ಲಿ ಕೆರೆಯನ್ನು ಅಭಿವೃದ್ಧಿ ಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶೇಷಾದ್ರಿ ತಿಳಿಸಿದರು.

ಆತಂಕದಲ್ಲಿ ಕೆಲ ಕುಟುಂಬಗಳು

ಗೌತಮ ನಗರದ ಐದನೇ ಕ್ರಾಸ್‌ನಲ್ಲಿ ಗೌಡನ ಕೆರೆಗೆ ಹೊಂದಿಕೊಂಡಂತೆ ಇರುವ ಕೆಲವು ಮನೆಗಳ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಹಲವಾರು ಮನೆಗಳು ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬರುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಮನೆಯ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲು ನಿರ್ಧರಿಸಿದ್ದಾರೆ. ಕೆರೆಯ ಬಳಿ ಇರುವ ರಸ್ತೆಯನ್ನು ಅಗೆದುಹಾಕಿದರೆ ನಿವಾಸಿಗಳು ಓಡಾಡುವುದು ಹೇಗೆ. ರೋಗಿಗಳು ಆಸ್ಪತ್ರೆಗೆ ಹೋಗುವುದು ಕಷ್ಟವಾಗುತ್ತದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಜತೆ ವಾದ ಮಾಡಿದರು. ನಗರಸಭೆ ಸದಸ್ಯರ ಸಂಬಂಧಿಯೊಬ್ಬರು ಕೆರೆಯಲ್ಲಿ ಮನೆ ಕಟ್ಟಲು ಹಣ ಕೊಟ್ಟು ಮೋಸಹೋಗಿದ್ದೇನೆ ಎಂದು ಬೇಸರ ತೋಡಿಕೊಂಡರು. ಈ ನಡುವೆ ಕೆರೆಯ ಒತ್ತುವರಿ ತೆರವು ನಿಲ್ಲಿಸುವಂತೆ ಕೆಲ ರಾಜಕಾರಣಿಗಳು ಅಧಿಕಾರಿಗಳಿಗೆ ಮೊಬೈಲ್ ಮೂಲಕ ಬೆದರಿಕೆ ಕೂಡ ಹಾಕುತ್ತಿದ್ದರು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು