ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಕೆರೆಗಳ ಪುನಶ್ಚೇತನಕ್ಕೆ ಅನುದಾನ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಭರವಸೆ
Last Updated 20 ಡಿಸೆಂಬರ್ 2019, 13:49 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರವು ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿದೆ. ಬರ ಪರಿಸ್ಥಿತಿಯ ಸಂದರ್ಭದಲ್ಲಿ ಅಂತರ್ಜಲ ವೃದ್ಧಿಗಾಗಿ ಕೆರೆಗಳ ಪುನಶ್ಚೇತನ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ವತಿಯಿಂದ ಕೈಗೊಂಡಿರುವ ನಗರದ ಕೋಲಾರಮ್ಮ ಅಮಾನಿ ಕೆರೆ ಪುನಶ್ಚೇತನ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿ, ‘ಅಂತರ್ಜಲ ವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಜಲಾಮೃತ, ಜಲಶಕ್ತಿ ಯೋಜನೆ ಜಾರಿಗೊಳಿಸಿವೆ. ಈ ಯೋಜನೆಗಳಡಿ ಕೆರೆ, ರಾಜಕಾಲುವೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಪುನಶ್ಚೇತನ ಮಾಡಲು ಉದ್ದೇಶಿಸಿರುವ ಕೆರೆಗಳ ಪಟ್ಟಿ ನೀಡಿದರೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಜಿಲ್ಲೆಯ ಕೆರೆಗಳು ಭರ್ತಿಯಾದರೆ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಇದರಿಂದ ಜಿಲ್ಲೆಯ ನೀರಿನ ಬವಣೆ ಬಗೆಹರಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿಶೇಷ ಆದ್ಯತೆ ಮೇರೆಗೆ ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೋಲಾರಮ್ಮ ಕೆರೆಯನ್ನು ಸ್ವಚ್ಛಗೊಳಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಕೆ.ಸಿ ವ್ಯಾಲಿ ಯೋಜನೆಯಿಂದ ₹ 8 ಕೋಟಿ ಹಣ ತೆಗೆದುಕೊಂಡು ಕೆರೆ ಪುನಶ್ಚೇತನ ಕಾಮಗಾರಿ ಆರಂಭಿಸಲಾಗಿದೆ. ಜಿಲ್ಲೆಯ ಬೇರೆ ಕೆರೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಮನವಿ ಮಾಡಿದರು.

‘ನಾನು ಚುನಾವಣೆಯಲ್ಲಿ ಆಯ್ಕೆಯಾದ ದಿನದಿಂದ ನಗರದ ಜನ ಕೆರೆ ಅಭಿವೃದ್ಧಿಗೆ ಮನವಿ ಮಾಡುತ್ತಿದ್ದರು. ಕೆರೆ ಸ್ವಚ್ಛತೆಗೆ ಇದೀಗ ಕಾಲ ಕೂಡಿ ಬಂದಿದ್ದು, ಜನ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಸರ್ಕಾರಕ್ಕೆ ಪ್ರಸ್ತಾವ: ‘ಜಲಾಮೃತ ಯೋಜನೆಯಡಿ ಜಿಲ್ಲೆಯ 40 ಕೆರೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜಲ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾಹಿತಿ ನೀಡಿದರು.

‘ಜಿಲ್ಲೆಯ 126 ಕೆರೆಗಳಿಗೆ ಆದ್ಯತೆ ಮೇರೆಗೆ ಕೆ.ಸಿ ವ್ಯಾಲಿ ಯೋಜನೆಯ ನೀರು ತುಂಬಿಸಲು ಉದ್ದೇಶಿಸಲಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಕೆರೆ ಭರ್ತಿಯಾಗಿವೆ. ಈ ವರ್ಷ ವಾಡಿಕೆಯಂತೆ ಮಳೆಯಾಗಿದ್ದರೆ ಶೇ 40ರಷ್ಟು ಕೆರೆಗಳು ತುಂಬುತ್ತಿದ್ದವು’ ಎಂದು ವಿವರಿಸಿದರು.

ಮಾದರಿ ಕೆರೆಯಾಗಿಸಿ: ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಿ. ಕೆರೆಗಳಲ್ಲಿನ ಅನುಪಯುಕ್ತ ಮರಗಳನ್ನು ತೆರವುಗೊಳಿಸಬೇಕು. ಸರ್ಕಾರಿ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ಇದಕ್ಕೆ ಅರಣ್ಯ ಇಲಾಖೆಯವರು ಸಹಕಾರ ನೀಡಬೇಕು’ ಎಂದು ಉಮಾ ಮಹದೇವನ್‌ ಸೂಚಿಸಿದರು.

‘ಕೋಲಾರಮ್ಮ ಅಮಾನಿ ಕೆರೆಯನ್ನು ಮಾದರಿ ಕೆರೆಯಾಗಿ ಅಭಿವೃದ್ಧಿಪಡಿಸಬೇಕು. ಸ್ಥಳೀಯ ಸಂಸ್ಥೆಯಿಂದ ಸಾಧ್ಯವಾದಷ್ಟು ಅನುದಾನ ಬಳಸಿ. ಸಣ್ಣ ನೀರಾವರಿ ಇಲಾಖೆಯಲ್ಲೂ ಕೆರೆ ಅಭಿವೃದ್ಧಿ ಅನುದಾನ ಉಳಿಕೆಯಾಗಿದ್ದು, ಇದಕ್ಕೆ ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪ ಕಾರ್ಯದರ್ಶಿ ಸಂಜೀವಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ನಗರಸಭೆ ಆಯುಕ್ತ ಶ್ರೀಕಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT