ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ನಲ್ಲಿ ಅಕ್ರಮ ಗಣಿಗಾರಿಕೆ ಸದ್ದು |ಆಂಧ್ರಕ್ಕೆ ಗ್ರಾನೈಟ್ ಕಳ್ಳಸಾಗಣೆ ಆರೋಪ

ಕೃಷ್ಣಮೂರ್ತಿ
Published : 20 ಆಗಸ್ಟ್ 2024, 5:09 IST
Last Updated : 20 ಆಗಸ್ಟ್ 2024, 5:09 IST
ಫಾಲೋ ಮಾಡಿ
Comments

ಕೆಜಿಎಫ್: ತಾಲ್ಲೂಕಿನ ಸರ್ಕಾರಿ ಜಮೀನುಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ತೆಗೆಯುತ್ತಿರುವ ಕಲ್ಲು ಬಂಡೆಗಳನ್ನು ಹೊರರಾಜ್ಯಕ್ಕೆ ಸಾಗಿಸಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಹಾನಿ ಉಂಟಾಗುತ್ತಿದೆ.

ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಹೇರಳವಾಗಿ ಬೆಲೆ ಬಾಳುವ ಕಲ್ಲುಗಳು (ಗ್ರಾನೈಟ್) ಸಿಗುತ್ತಿದ್ದು, ಕಲ್ಲು ಗಣಿಗಾರಿಕೆ ನಡೆಸುವ ದಂಧೆಕೋರರು ಸಣ್ಣ ರಸ್ತೆಗಳನ್ನು ಬಳಸಿಕೊಂಡು ಅವುಗಳನ್ನು ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದಾರೆ. 

ತಾಲ್ಲೂಕಿನ ಚೊಕ್ಕರಬಂಡೆ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ಅತ್ಯಂತ ಬೆಲೆಬಾಳುವ ಬಿಳಿ ಗ್ರಾನೈಟ್ ಹೇರಳವಾಗಿ ಲಭ್ಯವಿದೆ. ಆದರೆ, ದಂಧೆಕೋರರು ರಾಜರೋಷವಾಗಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಸಿಡಿಮದ್ದುಗಳ ಬಿರುಸಿಗೆ ಸಮೀಪದ ಗ್ರಾಮಗಳ ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ ಎನ್ನಲಾಗಿದೆ.

ಈ ಅಕ್ರಮ ದಂಧೆಯಲ್ಲಿ ಪ್ರಭಾವಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದರಿಂದಾಗಿ ಈ ಬಗ್ಗೆ ಮಾತನಾಡಲು ಭಯವಾಗುತ್ತದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಕಲ್ಲು ಒಡೆಯಲು ಇಡಲಾಗುವ ಡೈನಾಮೈಟ್‌ಗಳನ್ನು ನುರಿತ ಮತ್ತು ಅಧಿಕೃತ ವ್ಯಕ್ತಿಗಳಿಂದ ಮಾತ್ರವೇ ಸಿಡಿಸಬೇಕು. ಆದರೆ, ಇಲ್ಲಿ ಕಲ್ಲು ತೆಗೆಯುವ ಕೂಲಿ ಕಾರ್ಮಿಕರಿಂದಲೇ ಸ್ಫೋಟಕ ನಡೆಸಲಾಗುತ್ತಿದೆ. ಇದರಿಂದಾಗಿ ಈ ಡೈನಾಮೇಟ್ ಸ್ಫೋಟದಿಂದ ಮಕ್ಕಳು, ಜಾನುವಾರುಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. 

ಯಂತ್ರದಿಂದ ಬೃಹತ್ ಬಂಡೆಗಳನ್ನು ಕೊರೆಯುತ್ತಿರುವುದು 
ಯಂತ್ರದಿಂದ ಬೃಹತ್ ಬಂಡೆಗಳನ್ನು ಕೊರೆಯುತ್ತಿರುವುದು 

ಅಕ್ರಮವಾಗಿ ತೆಗೆದ ಗ್ರಾನೈಟ್ ಸೇರಿದಂತೆ ಇನ್ನಿತರ ಕಲ್ಲುಗಳನ್ನು ಆಂಧ್ರಪ್ರದೇಶಕ್ಕೆ ಸಾಗಿಸಲು ತಮಿಳುನಾಡು ನೋಂದಣಿ ಸಂಖ್ಯೆ ಲಾರಿಗಳನ್ನು ಬಳಸಲಾಗುತ್ತಿದೆ. ಈ ಬೃಹತ್ ಲಾರಿಗಳನ್ನು ಮರಗಿಡಗಳು ಮತ್ತು ಪೊದೆಗಳಲ್ಲಿ ನಿಲ್ಲಿಸಲಾಗುತ್ತಿದ್ದು, ರಾತ್ರಿ ವೇಳೆ ಮಾತ್ರ ಕಲ್ಲುಗಳನ್ನು ತುಂಬಿಕೊಂಡು ಗಡಿ ದಾಟಿ ಆಂಧ್ರಪ್ರದೇಶದತ್ತ ಹೋಗುತ್ತವೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಭಾರಿ ಪ್ರಮಾಣದ ಲಾರಿಗಳ ಸಂಚಾರದಿಂದ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಳು ಹಾಳಾಗುತ್ತಿವೆ. ಇಷ್ಟೆಲ್ಲಾ ಅನಾಹುತಗಳು ರಾಜರೋಷವಾಗಿ ನಡೆಯುತ್ತಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಂಧೆ ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ದಂಧೆ ನಡೆಸುವವರಿಗೆ ಜನಪ್ರತಿನಿಧಿಗಳ ಬೆಂಬಲವೂ ಕೂಡ ಇದೆ ಎಂಬ ಆರೋಪವಿದೆ ಎನ್ನಲಾಗುತ್ತಿದೆ. 

ಬಂಡೆಗಳ ಬಳಿ ಬಿಸಾಡಲಾಗಿರುವ ಸುಡುಮದ್ದಿನ ಪರಿಕರಗಳು
ಬಂಡೆಗಳ ಬಳಿ ಬಿಸಾಡಲಾಗಿರುವ ಸುಡುಮದ್ದಿನ ಪರಿಕರಗಳು

ಕಟ್ಟೆ ನಾಗಸಂದ್ರ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಸ್ಥಳ ಪರಿಶೀಲನೆಯಿಂದ ತಿಳಿದುಬಂದಿದೆ ಎಂದು ತಹಶೀಲ್ದಾರ್, ಹಿರಿಯ ಭೂ ವಿಜ್ಞಾನಿಗೆ ಪತ್ರ ಬರೆದಿದ್ದಾರೆ. ಆದರೆ, ಭೂ ವಿಜ್ಞಾನ ಇಲಾಖೆ ಮಾತ್ರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಗಣಿಗಾರಿಕೆ ನಿರಂತರವಾಗಿ ಮುಂದುವರಿದಿದೆ.

ಗಡಿ ಭಾಗದಲ್ಲಿ ಆಂಧ್ರ ಮತ್ತು ತಮಿಳುನಾಡಿನ ಲಾರಿಗಳು ಭಾರಿ ಕಲ್ಲುಗಳನ್ನು ತೆಗೆದುಕೊಂಡು ಸಂಚರಿಸುತ್ತಿದ್ದರೂ, ಜನವರಿ ತಿಂಗಳಿನಿಂದ ಈವರೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕಲ್ಲು ಸಾಗಣೆ ಮಾಡಿದ ಯಾವುದೇ ಲಾರಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಕೆಜಿಎಫ್ ಆರ್‌ಟಿಒ ವ್ಯಾಪ್ತಿಗೆ ಸೇರುವ ಕೆಜಿಎಫ್‌, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕಿಗೆ ಸಂಬಂಧಿಸಿಂತೆ ಎಂಟು ತಿಂಗಳಲ್ಲಿ ಕೇವಲ ಒಂಬತ್ತು ಪ್ರಕರಣಗಳು ಮಾತ್ರ ದಾಖಲಾಗಿದೆ. 

ಬಂಡೆಗಲ್ಲನ್ನು ಡೈನಾಮೈಟ್ ಇಡಲು ಕಾರ್ಮಿಕನೊಬ್ಬ ಕಾರ್ಯನಿರತನಾಗಿರುವುದು
ಬಂಡೆಗಲ್ಲನ್ನು ಡೈನಾಮೈಟ್ ಇಡಲು ಕಾರ್ಮಿಕನೊಬ್ಬ ಕಾರ್ಯನಿರತನಾಗಿರುವುದು
ಕ್ರಮಕ್ಕೆ ಪತ್ರ: ತಹಶೀಲ್ದಾರ್‌
‘ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬಂದ ಕಾರಣಕ್ಕೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದೇವೆ. ಗೋಮಾಳ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ದೃಢ ಪಟ್ಟಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ’ ಎಂದು ತಹಶೀಲ್ದಾರ್ ಕೆ.ನಾಗವೇಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT