ಶುಕ್ರವಾರ, ಆಗಸ್ಟ್ 12, 2022
27 °C
ನಕಲಿ ದಾಖಲೆಪತ್ರ ಸೃಷ್ಟಿ: ಅಧಿಕಾರಿಗಳ ಚಳಿ ಬಿಡಿಸಿದ ಜಿಲ್ಲಾಧಿಕಾರಿ ಸತ್ಯಭಾಮ

ಕೋಲಾರ: ಮಡಿವಾಳ ಬೆಟ್ಟದ ಜಾಗ ಅಕ್ರಮ ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿನ ಬೆಟ್ಟ ಗುಡ್ಡಗಳು ಹಾಗೂ ಗೋಮಾಳಗಳ ಮೇಲೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕಣ್ಣು ಬಿದ್ದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಲಂಚದಾಸೆಗೆ ತಾಲ್ಲೂಕಿನ ಮಡಿವಾಳ ಗ್ರಾಮದಲ್ಲಿನ ಬೆಟ್ಟದ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಟ್ಟ, ಗುಡ್ಡ, ಗೋಮಾಳ ಸೇರಿದಂತೆ ಸರ್ಕಾರಿ ಜಮೀನುಗಳ ನಕಲಿ ದಾಖಲೆಪತ್ರ ಸೃಷ್ಟಿಸುವ ಜಾಲ ಸಕ್ರಿಯವಾಗಿದೆ. ಈ ಜಾಲದ ಜತೆ ಕೈಜೋಡಿಸಿರುವ ಅಧಿಕಾರಿಗಳ ಹಣದಾಹಕ್ಕೆ ಸರ್ಕಾರಿ ಜಾಮೀನುಗಳು ರಾತ್ರೋರಾತ್ರಿ ಖಾಸಗಿಯವರ ಪಾಲಾಗುತ್ತಿವೆ. ಬೆಟ್ಟ ಗುಡ್ಡಗಳು ಮೂಲ ಸ್ವರೂಪವನ್ನೇ ಕಳೆದುಕೊಂಡು ಬಟಾ ಬಯಲಾಗುತ್ತಿವೆ.

ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರ ಅಕ್ಕಪಕ್ಕದ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹೆದ್ದಾರಿ ಅಕ್ಕಪಕ್ಕದ ಬೆಟ್ಟ ಗುಡ್ಡಗಳು, ಸರ್ಕಾರಿ ಜಮೀನುಗಳ ಮೇಲೆ ವಕ್ರದೃಷ್ಟಿ ಬೀರಿದ್ದಾರೆ.

ಜಿಲ್ಲೆಯ ರಾಮಸಂದ್ರ ಗಡಿಯಿಂದ ನಂಗಲಿ ಗಡಿವರೆಗೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲದ ಬೆಟ್ಟ ಗುಡ್ಡಗಳು ಅಪಾಯದ ಅಂಚಿನಲ್ಲಿದ್ದು, ಸರ್ಕಾರಿ ಜಮೀನು ರಕ್ಷಿಸಬೇಕಾದ ಅಧಿಕಾರಿಗಳೇ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಕದ್ದುಮುಚ್ಚಿ ಜಮೀನು ಮಂಜೂರು ಮಾಡಿರುವ ಆರೋಪ ಕೇಳಿಬಂದಿವೆ.

ಸರ್ಕಾರಿ ಜಮೀನಿಗೆ ನಕಲಿ ದಾಖಲೆಪತ್ರ ಸೃಷ್ಟಿಸುವ ಖಾಸಗಿ ವ್ಯಕ್ತಿಗಳು ರಾತ್ರಿ ವೇಳೆ ಜೆಸಿಬಿಗಳಿಂದ ಜಮೀನು ಸಮತಟ್ಟು ಮಾಡುತ್ತಾರೆ. ಬಳಿಕ ಬೆಳಗಿನ ವೇಳೆಯಲ್ಲಿ ತಮಗೂ ಜಮೀನಿಗೂ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ. ಮೊದಲು ಜಮೀನಿನಲ್ಲಿ ಕೃಷಿ ಆರಂಭಿಸಿ ಕೆಲ ವರ್ಷಗಳ ಬಳಿಕ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿ ವಾಣಿಜ್ಯ ಚಟುವಟಿಕೆ ಆರಂಭಿಸುತ್ತಾರೆ. ಇಲ್ಲವೇ ಬೇರೆಯವರಿಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಾರೆ.

ಡಿ.ಸಿ ಕೆಂಡಾಮಂಡಲ: ಈ ಹಿಂದೆ 2006–07ರಲ್ಲಿ ಕೋಲಾರ ನಗರದ ಕಸ ವಿಲೇವಾರಿಗಾಗಿ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಮಡಿವಾಳ ಗ್ರಾಮದ ಬೆಟ್ಟದ ಜಮೀನು ಮಂಜೂರು ಮಾಡಲಾಗಿತ್ತು. ಈ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಸಂಗತಿ ಹಾಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರ ಗಮನಕ್ಕೆ ಬಂದಿತ್ತು.

ಹೀಗಾಗಿ ಜಿಲ್ಲಾಧಿಕಾರಿಯು ಶುಕ್ರವಾರ ರಾತ್ರಿ ಜಮೀನಿಗೆ ದಿಢೀರ್‌ ಭೇಟಿ ನೀಡಿದಾಗ ಜೆಸಿಬಿಗಳ ಮೂಲಕ ಬೆಟ್ಟದ ಜಾಗ ಸಮತಟ್ಟು ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ. ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿಯು ತಹಶೀಲ್ದಾರ್‌ ಶೋಭಿತಾ, ವಕ್ಕಲೇರಿ ಹೋಬಳಿ ಕಂದಾಯ ನಿರೀಕ್ಷಕ ಲೋಕೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್‌ ಮೌನ: ‘ಜಿಲ್ಲಾ ಕೇಂದ್ರದ ಸಮೀಪವೇ ಇರುವ ಸರ್ಕಾರಿ ಜಮೀನಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಇದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಜಿಲ್ಲಾ ಕೇಂದ್ರದ ಸಮೀಪದಲ್ಲೇ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಏನು ಮಾಡುತ್ತಿದ್ದೀರಿ’ ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಹಶೀಲ್ದಾರ್ ವಿರುದ್ಧ ಹರಿಹಾಯ್ದರು. ಇದರಿಂದ ಬೆದರಿದ ಶೋಭಿತಾ ಅವರು ಮೌನಕ್ಕೆ ಶರಣಾಗಿದ್ದು ಕಂಡುಬಂತು.

ಬಂಡೆಗಳಿರುವ ಸರ್ಕಾರಿ ಬೆಟ್ಟದ ಜಾಗವನ್ನು ಬಿ ಖರಾಬು ಎಂದು ಪರಿಗಣಿಸಲಾಗುತ್ತದೆ. ಈ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ, ಅಧಿಕಾರಿಗಳು ಬೆಂಗಳೂರಿನ ವ್ಯಕ್ತಿಗಳಿಗೆ ಮಂಜೂರು ಮಾಡಿರುವುದು ಜಿಲ್ಲಾಧಿಕಾರಿಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು