ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿಯಲ್ಲಿ ಅಕ್ರಮ: ಆರೋಪ

Last Updated 11 ಜನವರಿ 2020, 10:03 IST
ಅಕ್ಷರ ಗಾತ್ರ

ಕೋಲಾರ: ‘ನಗರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದ್ದು, ಅಧಿಕಾರಿಗಳು ಮಾಹಿತಿ ಕೊಡದೆ ಅಕ್ರಮ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ’ ಎಂದು ನಗರಸಭೆ 14ನೇ ವಾರ್ಡ್‌ ಸದಸ್ಯ ಎಸ್‌.ಆರ್‌.ಮುರಳಿಗೌಡ ಆರೋಪಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಕ್ರಮದಲ್ಲಿ ನಗರಸಭೆ ಅಧಿಕಾರಿಗಳ ಪಾತ್ರವಿದೆ. ಹೀಗಾಗಿ ಸಾರ್ವಜನಿಕರಿಗೆ ಅಭಿವೃದ್ಧಿ ಕಾಮಗಾರಿಗಳ ಮತ್ತು ಅವ್ಯವಹಾರದ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರಿಗಳ ನಡೆ ಅನುಮಾನಾಸ್ಪದವಾಗಿದೆ’ ಎಂದು ಟೀಕಿಸಿದರು.

‘2019ರ ಮಾರ್ಚ್‌ನಿಂದ ಈವರೆಗೆ ನಡೆದಿರುವ ಕಾಮಗಾರಿಗಳಲ್ಲಿ ಹಣ ದುರ್ಬಳಕೆಯಾಗಿದೆ. ಅಮೃತ್ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ. ಮಳೆ ನೀರು ಕಾಲುವೆಗಳನ್ನು ಸರಿಯಾಗಿ ನಿರ್ಮಾಣ ಮಾಡಿಲ್ಲ. ರಸ್ತೆಗಳು ನಿರ್ಮಾಣವಾದ ಮೂರ್ನಾಲ್ಕು ತಿಂಗಳಲ್ಲೇ ಹಾಳಾಗಿವೆ’ ಎಂದು ದೂರಿದರು.

ದಲ್ಲಾಳಿಗಳ ಹಾವಳಿ: ‘ಚುನಾಯಿತ ಸದಸ್ಯರು ಇಲ್ಲದ ಸಂದರ್ಭದಲ್ಲಿ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಕಾಮಗಾರಿಗಳ ಗುಣಮಟ್ಟದ ಸಂಬಂಧ ಸಾರ್ವಜನಿಕರಿಂದ ದೂರು ಬಂದರೂ ನಗರಸಭೆ ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಅಧಿಕಾರಿಗಳು ಲಂಚದಾಸೆಗೆ ಗುತ್ತಿಗೆದಾರರ ಜತೆ ಶಾಮೀಲಾಗಿ ಅಕ್ರಮ ನಡೆಸಿದ್ದಾರೆ’ ಎಂದು ಆರೋಪ ಮಾಡಿದರು.

‘ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಸಾರ್ವಜನಿಕರ ಆಸ್ತಿಯ ದಾಖಲೆಪತ್ರಗಳಿಗೆ ಸಂಬಂಧಿಸಿದ ಕಡತಗಳು ಕಾಣೆಯಾಗುತ್ತಿವೆ. ಲೆಕ್ಕ ವಿಭಾಗದಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ದೋಚಲಾಗುತ್ತಿದೆ. ಕಾಮಗಾರಿ ನಡೆಯದಿದ್ದರೂ ಗುತ್ತಿಗೆದಾರರಿಗೆ ಬಿಲ್‌ ಮಂಜೂರು ಮಾಡಲಾಗುತ್ತಿದೆ. ನಗರಸಭೆಯಲ್ಲಿನ ಅಕ್ರಮಗಳ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT