ಶುಕ್ರವಾರ, ಮೇ 27, 2022
21 °C

ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಿ: ಮುಖ್ಯ ಸಚೇತಕ ವೈಎಎನ್‌ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮೆಕಾಲೆ ಶಿಕ್ಷಣ ಪದ್ಧತಿ ತೆಗೆದು ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸುವ ಮೂಲಕ ನವಭಾರತ ಕಟ್ಟುವ ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸು ಮಾಡೋಣ. ಮಕ್ಕಳಿಗೆ ನೈಪುಣ್ಯತೆಯ ಶಿಕ್ಷಣ ನೀಡೋಣ’ ಎಂದು ವಿಧಾನ ಪರಿಷತ್‌ನಲ್ಲಿನ ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ವೈಎಎನ್ ಸ್ನೇಹಿತರ ಬಳಗವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಮೋದಿಯವರ ಚಾಣಕ್ಷ ವಿದೇಶಾಂಗ ನೀತಿಯ ಫಲವಾಗಿ ಉಕ್ರೇನ್‍ನಿಂದ 30 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಸಾಧ್ಯವಾಯಿತು’ ಎಂದರು.

‘ಶಿಕ್ಷಕರು ನನ್ನನ್ನು ಪ್ರೀತಿಯಿಂದ ಆಧರಿಸಿ ಬೆಳೆಸಿದ್ದು, ಅವರ ಋಣದಲ್ಲಿದ್ದೇನೆ. ಖಾಸಗಿ, ಅನುದಾನಿತ, ಸರ್ಕಾರಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಅಧಿಕಾರಿಗಳೊಂದಿಗೆ ಸಮನ್ವಯತೆ ಕಾಯ್ದುಕೊಂಡು ಶಿಕ್ಷಕರ ಹಿತರಕ್ಷಣೆಗೆ ಹೆಜ್ಜೆ ಇಟ್ಟಿದ್ದೇನೆ. ಕೋವಿಡ್ ಸಂಕಷ್ಟದಲ್ಲಿ ಶೇ 100 ವೇತನ ನೀಡಿಕೆ, ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಿಕ್ಷಕರಿಗೆ ₹ 5 ಸಾವಿರ ಪ್ಯಾಕೇಜ್ ನೀಡಿದ್ದು ನಮ್ಮ ಸರ್ಕಾರ’ ಎಂದು ತಿಳಿಸಿದರು.

‘5 ವರ್ಷದ ಆಡಳಿತದಲ್ಲಿ 2 ವೇತನ ಆಯೋಗ ನೀಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರದ್ದು. ಈ ಕಾರ್ಯ ಯಾವ ಪಕ್ಷದಿಂದಲೂ ಸಾಧ್ಯವಿಲ್ಲ. ಈಗಲೂ 7ನೇ ವೇತನ ಆಯೋಗ ಜಾರಿ, ಕೇಂದ್ರ ಸಮಾನ ವೇತನ ನೀಡುವುದು ನಮ್ಮದೇ ಸರ್ಕಾರ. ರಾಜ್ಯದಲ್ಲಿ ಮುಂದಿನ ಬಾರಿಯೂ ನಮ್ಮದೇ ಸರ್ಕಾರ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುರುಭವನ ನಿರ್ಮಾಣ: ‘ಸದನದಲ್ಲಿ ಶೇ 80ರಷ್ಟು ಚರ್ಚೆ ಶಿಕ್ಷಕರ ಸಮಸ್ಯೆಗಳದ್ದೇ ಆಗಿದೆ. ಪಿಯುಸಿ ಉಪನ್ಯಾಸಕರ ವರ್ಗಾವಣೆ, ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ಬಡ್ತಿ ಸಮಸ್ಯೆ ಪರಿಹಾರಕ್ಕೆ ಒತ್ತು ಕೊಡುತ್ತೇವೆ. ಖಾಸಗಿ, ಅನುದಾನಿತ ಶಾಲಾ ಶಿಕ್ಷಕರಿಗೆ ಹೆಲ್ತ್ ಕಾರ್ಡ್ ಕೊಡಿಸುವ ಉದ್ದೇಶವಿದೆ. ಗುರುಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆಯುತ್ತೇವೆ’ ಎಂದು ಭರವಸೆ ನೀಡಿದರು.

‘ಅಧಿಕಾರ, ಅವಕಾಶ ಸಿಕ್ಕಾಗ ಕುಟುಂಬದ ಏಳಿಗೆಗೆ ದುಡಿಯುವ ಕಾಲಘಟ್ಟದಲ್ಲಿ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕರ ಮತ್ತು ಉಪನ್ಯಾಸಕರ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಮನೆ ಮಾತಾಗಿದ್ದಾರೆ. ಸೇವೆ ಮಾಡುವ ಮನೋಭಾವ ಹೊಂದಿರುವ ಅವರಿಗೆ ಮತ್ತಷ್ಟು ಉನ್ನತ ಹುದ್ದೆ ಸಿಗಲಿ’ ಎಂದು ವೈಎಎನ್ ಸ್ನೇಹಿತರ ಬಳಗದ ಅಧ್ಯಕ್ಷ ಉದಯ್‌ಕುಮಾರ್ ಆಶಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಗೋಪಾಲಗೌಡ, ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್, ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು