ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿನಾಥನ್ ವರದಿ ಜಾರಿ ಮಾಡಿ: ಸರ್ಕಾರಕ್ಕೆ ಶಾಸಕ ಶ್ರೀನಿವಾಸಗೌಡ ಆಗ್ರಹ

Last Updated 13 ಜೂನ್ 2021, 13:32 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ದು ಸಾಕು. ಅನ್ನದಾತರ ಉಳಿಸುವ ಇಚ್ಛೆಯಿದ್ದರೆ ಶೀಘ್ರವೇ ಸ್ವಾಮಿನಾಥನ್ ಆಯೋಗದ ವರದಿ ಯಥಾವತ್‌ ಜಾರಿ ಮಾಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆಗ್ರಹಿಸಿದರು.

ಮನ್ವಂತರ ಜನಸೇವಾ ಟ್ರಸ್ಟ್ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡರು ರೈತರಿಂದ ಖರೀದಿಸಿದ ತರಕಾರಿಗಳನ್ನು ನಗರದ ಹಾರೋಹಳ್ಳಿಯಲ್ಲಿ ಭಾನುವಾರ ಬಡ ಜನರಿಗೆ ವಿತರಿಸಿ ಮಾತನಾಡಿದರು.

‘ಈವರೆಗೂ ದೇಶ ಆಳಿದ ಯಾವುದೇ ಸರ್ಕಾರ ರೈತರಿಗೆ ಬೆಳೆ ಇಡಲು ಸಾಲ ಸೌಲಭ್ಯ, ಕೃಷಿಗೆ ನೀರು, ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವ ಬದ್ಧತೆ ತೋರಿಲ್ಲ. ಎಲ್ಲರೂ ತಾವು ರೈತಪರ ಎಂದು ಹೇಳುತ್ತಲೇ ಬಂದಿದ್ದಾರೆ. ಸ್ವಾಭಿಮಾನಿ ರೈತರು ಸರ್ಕಾರದ ಸಹಾಯಧನ, ಪ್ಯಾಕೇಜ್‌ಗೆ ಕೈಚಾಚಲು ಸಿದ್ಧವಿಲ್ಲ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡಿದರೆ ಸಾಕು. ಅವರು ಎಂದಿಗೂ ಸರ್ಕಾರಗಳಿಂದ ಭಿಕ್ಷೆ ಬೇಡುವುದಿಲ್ಲ’ ಎಂದರು.

‘ಪ್ರತಿ ವರ್ಷ ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅವರು ಬೆಳೆದ ಬೆಳೆಗೆ ಬೆಲೆ ಸಿಗದಿರುವುದು. ಸಾಲ ಮಾಡಿ ಬೆವರು ಸುರಿಸಿ ಬೆಳೆಸಿದ ಬೆಳೆ ಒಳ್ಳೆಯ ಫಸಲು ನೀಡಿದರೂ ಮಾರುಕಟ್ಟೆ ಇಲ್ಲ. ರೈತರ ಶ್ರಮಕ್ಕೂ ಬೆಲೆ ಸಿಗದ ಪರಿಸ್ಥಿತಿಯಿಂದ ಅನ್ನದಾತರು ಕಂಗೆಟ್ಟಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೈತರನ್ನು ಉಳಿಸುವ ಇಚ್ಛೆಯಿದ್ದರೆ ಕೂಡಲೇ ಸ್ವಾಮಿನಾಥನ್ ವರದಿ ಜಾರಿ ಮಾಡಲಿ. ಇಲ್ಲವಾದಲ್ಲಿ ತಮ್ಮದು ರೈತಪರ ಸರ್ಕಾರವೆಂಬ ಪ್ರಚಾರದ ಗಿಮಿಕ್ ನಿಲ್ಲಿಸಲಿ’ ಎಂದು ಗುಡುಗಿದರು.

ಉಳಿಗಾಲವಿಲ್ಲ: ‘ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ರೈತರ ಬೆಳೆಗಳಿಗೆ ಬೆಲೆ ಸಿಗದೆ ನಲುಗಿದ್ದಾರೆ. ಸರ್ಕಾರ ನೀಡುತ್ತಿರುವ ಪ್ಯಾಕೇಜ್ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಟೀಕಿಸಿದರು.

‘ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ರಾಜಕಾರಣಿಗಳು ಬೀಗುತ್ತಿದ್ದಾರೆ. ಇದಕ್ಕೆ ಕಾರಣ ಯಾರೆಂಬುದನ್ನು ಅವರು ಮರೆತಿದ್ದಾರೆ. ದೇಶಕ್ಕೆ ಅನ್ನ ನೀಡುತ್ತಿರುವ ರೈತ ತನ್ನ ಕೃಷಿ ಬದುಕಿನಲ್ಲಿ ಸೋತರೆ ದೇಶಕ್ಕೆ ಉಳಿಗಾಲವಿಲ್ಲ’ ಎಂದು ಎಚ್ಚರಿಸಿದರು.

‘ಕಣ್ಣೊರೆಸುವ ತಂತ್ರ, ಮಾತುಗಳು ಸಾಕು. ಸರ್ಕಾರಗಳು ರೈತರ ನೆರವಿಗೆ ನಿಲ್ಲಬೇಕು. ಅವರಿಗೆ ಬಡ್ಡಿರಹಿತ ಸಾಲ, ಕೃಷಿಗೆ ನೀರು, ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡಿದರೆ ಸಾಕು. ರೈತರು ಎಂದಿಗೂ ಸರ್ಕಾರಗಳು ನೀಡುವ ಚಿಲ್ಲರೆ ಸಹಾಯಧನಕ್ಕೆ ಕೈ ಚಾಚುವುದಿಲ್ಲ. ಬೆಲೆ, ಮಾರುಕಟ್ಟೆ ಸಿಗದೆ ತೋಟದಲ್ಲೇ ತರಕಾರಿ ಕೊಳೆಯುತ್ತಿರುವುದರಿಂದ ಕಣ್ಣೀರಿಡುತ್ತಿರುವ ರೈತರಿಗೆ ನೆರವಾಗುವ ಸಂಕಲ್ಪದೊಂದಿಗೆ ಈ ಅಳಿಲು ಸೇವೆ ಮಾಡುತ್ತಿದ್ದೇವೆ. ಇದೊಂದು ಪುಣ್ಣದ ಕೆಲಸ ಎಂದು ಭಾವಿಸಿದ್ದೇನೆ’ ಎಂದರು.

ನುಡಿದಂತೆ ನಡೆದಿದ್ದಾರೆ: ‘ಗೋವಿಂದಗೌಡರು ಲಾಕ್‌ಡೌನ್‌ ಅವಧಿಯಲ್ಲಿ ರೈತರ ತೋಟಗಳಿಂದ ತರಕಾರಿ ಖರೀದಿಸಿ ಬಡವರಿಗೆ ನೀಡುವ ಮೂಲಕ ಕೃಷಿಕರು, ಬಡವರಿಗೂ ನೆರವಾಗುವ ಘೋಷಣೆ ಮಾಡಿ ನುಡಿದಂತೆ ನಡೆದಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಅಣ್ಣಿಹಳ್ಳಿ ಎಸ್‍ಎಫ್‌ಸಿಎಸ್‌ ಅಧ್ಯಕ್ಷ ನಾಗರಾಜ್, ಮನ್ವಂತರ ಜನಸೇವಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್, ಕಾಂಗ್ರೆಸ್ ಮುಖಂಡ ಕುಮಾರ್, ಮುಖಂಡರಾದ ನಾರಾಯಣಸ್ವಾಮಿ, ಬಾಲನ್, ಸತ್ಯನಾರಾಯಣರಾವ್, ನಿರಂಜನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT