ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲಿ ಹೆಚ್ಚಾಯ್ತು ಇಲಿ ಬೇಟೆ

ಕರ್ಫ್ಯೂ ತಂದ ಗ್ರಾಮೀಣ ಜೀವನ
Last Updated 5 ಮೇ 2021, 5:38 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಪಟ್ಟಣ ಪ್ರದೇಶದಲ್ಲಿ ಜನತಾ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಪೊಲೀಸರ ಕಣ್ಗಾವಲಿನ ನಡುವೆ ಕೋವಿಡ್ ತಡೆ ನಿಯಮ ಪಾಲನೆಯಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದ ಪರಿಸ್ಥಿತಿ ಭಿನ್ನವಾಗಿದೆ.

ಸರ್ಕಾರ ಕರ್ಫ್ಯೂ ಜಾರಿಗೆ ತರುತ್ತಿದ್ದಂತೆ, ನಗರ ಪ್ರದೇಶದಲ್ಲಿ ದುಡಿಯುತ್ತಿದ್ದ ಜನರು ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಬಿರು ಬೇಸಿಗೆಯಲ್ಲಿ ಮಾಡಲು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ನಗರ ಪ್ರದೇಶದಿಂದ ಹಿಂದಿರುಗಿ ಕುರಿ ಸಾಕಾಣಿಕೆ ಮಾಡಿ ಕೈ ಸುಟ್ಟುಕೊಂಡವರು, ಮತ್ತೆ ಅಂಥ ಸಾಹಸಕ್ಕೆ ಕೈ ಹಾಕುತ್ತಿಲ್ಲ.

ಗ್ರಾಮೀಣ ಪ್ರದೇಶದ ಯುವಕರು ಕೋವಿಡ್ ಭಯ ಮರೆತು ತಮ್ಮದೇ ಆದ ರೀತಿಯಲ್ಲಿ
ಕಾಲ ಕಳೆಯುತ್ತಿದ್ದಾರೆ. ಕೆಲವು ಯುವಕರು ನೀರುಳ್ಳ ಕೆರೆಗಳಿಗೆ ಹೋಗಿ ಗಾಳ ಹಾಕಿ ಮೀನು ಹಿಡಿಯುತ್ತಾರೆ. ಹಿಡಿದ ಮೀನನ್ನು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ. ಇನ್ನು ಕೆಲವರು ಕೆರೆಯಲ್ಲಿನ ಏಡಿಗಳನ್ನು ಹಿಡಿದು ಬೆಂಕಿಗೆ ಹಾಕಿ ಚಿಪ್ಪು ಬಿಡಿಸಿ ಭಕ್ಷಿಸುತ್ತಾರೆ.

ನಿಂತಿದ್ದ ಇಲಿ ಬೇಟೆಯೂ ಮರುಜೀವ ಪಡೆದಿದೆ. ಕೆಲಸವಿಲ್ಲದೆ ಮನೆಗಳಲ್ಲಿ ಕುಳಿತಿರುವ ಕೆಲವರು ಸನಿಕೆ ಹಿಡಿದು ಬಯಲಿಗೆ ಹೋಗಿ ಬಿಲ ಅಗೆದು ಇಲಿ ಹಿಡಿಯುವ ಕಾಯಕದಲ್ಲಿ ತೊಡಗಿದ್ದಾರೆ.

ರಾತ್ರಿ ಹೊತ್ತು ಇಲಿ ಹಿಡಿಯುವ ಸಾಧನ ಅಳವಡಿಸಿ, ಇಲಿ ಹಿಡಿಯವುದುಂಟು. ಹಿಡಿದ ಇಲಿಗಳನ್ನು ಬೆಂಕಿಯಲ್ಲಿ ಹಾಕಿ ಸುಟ್ಟು ತಿನ್ನುತ್ತಾರೆ. ಹೆಚ್ಚಾಗಿ ಸಿಕ್ಕಿದರೆ ಸಾಂಬಾರು ಮಾಡಿ ಸವಿಯುತ್ತಾರೆ.

‘ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ಕಾಲ ಕಳೆಯುವುದು ಕಷ್ಟವಾಗಿದೆ. ಆದ್ದರಿಂದ ಇಲಿ ಬೇಟೆಗೆ
ಬಂದಿದ್ದೇನೆ. ಬೆಂಗಳೂರಿನಿಂದ ಹಿಂದಿರುಗಿರುವ ಜನ, ಬೇಟೆಗೆ ಬರುತ್ತಿರುವುದರಿಂದ ಇಲಿಗಳು ಸಿಗುತ್ತಿಲ್ಲ’ ಎಂದು ಶಿವಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

‌ಬಾರ್‌ಗಳನ್ನು ಮುಚ್ಚಿರುವುದು ಮದ್ಯಪ್ರಿಯರ ಪಾಲಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹಾಗಾಗಿ ಬಯಲಿನಲ್ಲಿ ಕುಳಿತು ಕುಡಿಯುವ ಪರಿಪಾಠ ಹೆಚ್ಚಿದೆ. ಪಟ್ಟಣದ ಹೊರ ವಲಯದ ಮಾವಿನ ತೋಟಗಳು, ರಸ್ತೆ ಬದಿಗಳು ಕುಡುಕರ ತಾಣಗಳಾಗಿ ಪರಿಣಮಿಸಿವೆ. ಇದು ಕೃಷಿಕ ಸಮುದಾಯದ ಬೇಸರಕ್ಕೆ ಕಾರಣವಾಗಿದೆ.

ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರು ಕೆಲಸ ಕಳೆದುಕೊಂಡಿಲ್ಲ. ಕೊಳವೆ ಬಾವಿಗಳ ಆಶ್ರಯದಲ್ಲಿ ಬೆಳೆಯಲಾಗಿರುವ ಟೊಮೆಟೊ ಹಾಗೂ ತರಕಾರಿ ತೋಟಗಳಲ್ಲಿ ಕೆಲಸ ಮಾಡುತಿದ್ದಾರೆ. ಕೃಷಿ ಕಾರ್ಮಿಕರಿಗೆ ಸಾಕಷ್ಟು ಬೇಡಿಕೆ ಇದೆ. ಒಳ್ಳೆ ಕೂಲಿಯೂ ಸಿಗುತ್ತಿದೆ. ಕೂಲಿಗಿಂತ ಒಪ್ಪಂದದ ಮೇಲೆ ಕೆಲಸ ಮಾಡುವ ತಂಡಗಳ ಸಂಖ್ಯೆ ಹೆಚ್ಚುತ್ತಿದೆ.

ಕರ್ಫ್ಯೂ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಜಾರಿಯಲ್ಲಿದೆ. ಆದರೆ ಗ್ರಾಮೀಣ ಜೀವನ ಎಂದಿನಂತೆ ಸಾಗಿದೆ. ಹೈನುಗಾರಿಕೆ, ಬಯಲಿನ ಮೇಲೆ ಕುರಿ ಹಾಗೂ ಮೇಕೆ ಸಾಕಾಣಿಕೆ ನಿರಾತಂಕವಾಗಿ ಮುಂದುವರಿದಿದೆ. ಆದರೆ ಗ್ರಾಮೀಣಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT