ಬುಧವಾರ, ಜೂನ್ 16, 2021
23 °C

ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕು ಹಾಗೂ ನಗರದ ವಿವಿಧೆಡೆ ಸರ್ಕಾರಿ ಕಚೇರಿಗಳು ಮತ್ತು ಸಂಘ ಸಂಸ್ಥೆಗಳ ಆವರಣದಲ್ಲಿ ಗುರುವಾರ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

‘ದೇಶದ ಸ್ವಾತಂತ್ರ್ಯಕ್ಕಾಗಿ ಮಹನೀಯರು ನಡೆಸಿದ ಸಂಘಟಿತ ಹೋರಾಟ ಮತ್ತು ಗಡಿಯಲ್ಲಿ ಸೈನಿಕರು ಮಾತೃಭೂಮಿ ರಕ್ಷಣೆಗೆ ನಿರಂತರವಾಗಿ ಮಾಡುತ್ತಿರುವ ಸೇವೆಯು ನಮಗೆ ಆದರ್ಶವಾಗಬೇಕು’ ಎಂದು ಜಿಲ್ಲಾ ಖಜಾನೆ ಉಪ ನಿರ್ದೇಶಕಿ ಎನ್.ರುಕ್ಮಿಣಿದೇವಿ ಹೇಳಿದರು.

ಜಿಲ್ಲಾ ಖಜಾನೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಸರ್ಕಾರಿ ನೌಕರರು ಕಚೇರಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಜನರ ಪ್ರೀತಿ ಸಂಪಾದಿಸಬೇಕು. ಆರ್ಥಿಕತೆಗೆ ಧಕ್ಕೆಯಾಗದಂತೆ ಲೆಕ್ಕ ನಿರ್ವಹಣೆಯೂ ನಮ್ಮದೇ ಹೊಣೆಯಾಗಿರುವುದರಿಂದ ಜವಾಬ್ದಾರಿ ಹೆಚ್ಚಿದೆ’ ಎಂದರು.

ಮಾಜಿ ಯೋಧರಾದ ವಿ.ವೆಂಕಟೇಶ್, ಶಿವಪ್ಪ ದಡ್ಡಿಮನಿ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಖಜಾನಾಧಿಕಾರಿ ವಿ.ರಾಮಮೂರ್ತಿ, ಮುಳಬಾಗಿಲು ತಾಲ್ಲೂಕು ಸಹಾಯಕ ಖಜಾನಾಧಿಕಾರಿ ನಾರಾಯಣರಾವ್ ಪಾಲ್ಗೊಂಡರು.

ಸ್ವಚ್ಛತಾ ಅಭಿಯಾನ: ಭಾರತ ಪರಿವರ್ತನಾ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಸಲಾಯಿತು.

ಕಾರಂಜಿಕಟ್ಟೆ ಬಡಾವಣೆಯ ವಿವಿಧ ಸ್ಥಳಗಳಲ್ಲಿ 15 ಕಸದ ಬುಟ್ಟಿ ಅಳವಡಿಸಿದ ಪ್ರತಿಷ್ಠಾನದ ಸದಸ್ಯರು, ‘ಬಡಾವಣೆ ಜನರು ತಮ್ಮ ಮನೆಯಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸ ಪೌರ ಕಾರ್ಮಿಕರಿಗೆ ನೀಡಬೇಕು. ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಅಥವಾ ಚರಂಡಿಗಳಲ್ಲಿ ಕಸ ಸುರಿಯಬಾರದು’ ಎಂದು ಮನವಿ ಮಾಡಿದರು.

ಎ.ಪಿ.ಜೆ ಅಬ್ದುಲ್‌ ಕಲಾಂ ಸೋಷಿಯಲ್ ವೆಲ್‍ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಮ್ಮವಾರಿಪೇಟೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂಆರ್ ಟೊಮೆಟೊ ಮಂಡಿ ಮಾಲೀಕ ಶ್ರೀನಾಥ್‌, ‘ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಅವರನ್ನು ಸ್ಮರಿಸುವುದು ಪ್ರಜೆಗಳ ಕರ್ತವ್ಯ’ ಎಂದು ಹೇಳಿದರು.

ಸಾಲ ವಿತರಣೆ: ಜಿಲ್ಲಾ ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಸಾಲ ವಿತರಿಸಲಾಯಿತು.

‘ಸರ್ವ ಕಾಲಕ್ಕೂ, ಸರ್ವರಿಗೂ ಆರೋಗ್ಯ ಸೇವೆ ದೊರೆಯಲು ಶ್ರಮಿಸಬೇಕು. ಸ್ವಾತಂತ್ರ್ಯೋತ್ಸವ ತೋರಿಕೆಯ ಆಚರಣೆ ಆಗಬಾರದು. ದೇಶಾಭಿಮಾನ ಹೃದಯಂತರಾಳದಲ್ಲಿ ಮೂಡಬೇಕು. ಪ್ರತಿ ಪ್ರಜೆಯೂ ದೇಶಾಭಿಮಾನ ಮೈಗೂಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯ ದಿನದ ಆಚರಣೆ ಸಾರ್ಥಕವಾಗುತ್ತದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥರೆಡ್ಡಿ ಹೇಳಿದರು.

ಶ್ರಮ ಸಾರ್ಥಕ: ‘ದೇಶ ಕಟ್ಟಲು ಹಿರಿಯರು ಮಾಡಿದ ಶ್ರಮ ಸಾರ್ಥಕವಾಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಹೇಮಾದ್ರಿ ಕಾಲೇಜಿನ ಸಂಸ್ಥಾಪಕ ಎಸ್‌.ಬಿ.ಮುನಿವೆಂಕಟಪ್ಪ ಹೇಳಿದರು.

ಕಾಲೇಜಿನಲ್ಲಿ ಧ್ವಜಾರೋಹಣ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆಯಾಗಿ ದೊರೆತಿಲ್ಲ. ಇದರ ಹಿಂದೆ ಸಾವಿರಾರು ಜನರ ಬಲಿದಾನವಿದೆ. ಆದ ಕಾರಣ ಕೇವಲ ತೋರಿಕೆಗಾಗಿ ಸ್ವಾತಂತ್ರ್ಯ ದಿನ ಆಚರಿಸಬಾರದು’ ಎಂದು ಕಿವಿಮಾತು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.