ಶುಕ್ರವಾರ, ಮೇ 27, 2022
21 °C
ಕಲುಷಿತ ಕೆರೆಗೆ ಕೆ.ಸಿ. ವ್ಯಾಲಿ ಮೂಲಕ ನೀರು ಹರಿಸಲು‌ ಯೋಜನೆ

ಇಂಡ್ಲಕೆರೆ: ತ್ಯಾಜ್ಯ, ಅಕ್ರಮ ಕಟ್ಟಡಗಳ ತಾಣ

ಜಿ.ವಿ. ಪುರುಷೋತ್ತಮ ರಾವ್‌ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ನಗರದ ಕೆಜಿಎಫ್ ರಸ್ತೆಯಲ್ಲಿರುವ ನೂರಾರು ವರ್ಷಗಳ ಇತಿಹಾಸವಿರುವ ಇಂಡ್ಲಕೆರೆ ಮಾಂಸ ಹಾಗೂ ಇತರೆ ತ್ಯಾಜ್ಯ ಸುರಿಯುವ ಕೇಂದ್ರವಾಗಿ ಕಲುಷಿತಗೊಂಡಿದೆ. ಅಲ್ಲದೇ ಅಕ್ರಮ ಕಟ್ಟಡಗಳಿಂದ ಅಚ್ಚುಕಟ್ಟು ನಾಪತ್ತೆಯಾಗಿದೆ.

‘ವಿಜಯನಗರ ಅರಸರ ಆಳ್ವಿಕೆ ಕಾಲದಲ್ಲಿ ಈ ಕೆರೆ ನಿರ್ಮಾಣಗೊಂಡಿರುವ ಇತಿಹಾಸವಿದೆ. ಪುರಾಣ ಪ್ರಸಿದ್ಧ ಆಂಜನಾದ್ರಿ ಬೆಟ್ಟದ ತಪ್ಪಲಲ್ಲಿ ಹರಿದು ಬರುವ ಸಿಹಿನೀರಿನ ಸೆಲೆಗಳಿಂದ ಈ ಕೆರೆ ಸದಾ ತುಂಬಿ ನಳನಳಿಸುತ್ತಿರುವುದರಿಂದ ಜನರು ಇದನ್ನು ಪವಿತ್ರ ತೀರ್ಥವೆಂದು ಭಾವಿಸುತ್ತಿದ್ದರು.
ಹಿಂದೆ ಸಹಜವಾಗಿಯೇ ಈ ಕೆರೆ ಮುಳಬಾಗಿಲು ಜನರ ಕುಡಿಯುವ ನೀರಿನ ಮೂಲವಾಗಿತ್ತು. ನಗರದ ಕುಡಿಯುವ ನೀರಿನ ಅಗತ್ಯ ಪೂರೈಕೆ ಜತೆಗೆ ಕೆರೆ ನೀರನ್ನು ಕೃಷಿ ಚಟುವಟಿಕೆಗಳಿಗೂ ಬಳಸಲಾಗುತ್ತಿತ್ತು’ ಎನ್ನುತ್ತಾರೆ ಕೆರೆ ಅಚ್ಚುಕಟ್ಟುದಾರ ರಹೀಂಸಾಬ್.

‘ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಇದೀಗ ಅಕ್ರಮ ಕಟ್ಟಡ, ನಿವೇಶನಗಳು ನಿರ್ಮಾಣವಾಗಿದ್ದು, ನೀರಿನ ಹರಿವಿನ ಮೇಲೆ ಪ್ರಭಾವ ಬೀರಿದೆ. ಜೀವಜಲದಿಂದ ತುಂಬಿತುಳುಕುತ್ತಿದ್ದ ಕೆರೆ ಈಗ ವಿಷದ ಗುಂಡಿಯಾಗಿದೆ. ನಗರದ ಮಾಂಸದ ಅಂಗಡಿಯವರು ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಇದರೊಂದಿಗೆ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳೆಲ್ಲವೂ ಕೆರೆಯ ಒಡಲು ಸೇರುತ್ತಿದೆ. ಇದರಿಂದ ಕೆರೆಯಷ್ಟೇ ಅಲ್ಲ ಇಡೀ ಪರಿಸರವೇ ಮಾಲಿನ್ಯಗೊಂಡಿದೆ’ ಎಂದು ಸ್ಥಳೀಯರು ದೂರುತ್ತಾರೆ.

‘ಇಂಡ್ಲಕೆರೆ ಅಚ್ಚುಕಟ್ಟು ಕಂದಾಯ ಇಲಾಖೆಗೆ ಸೇರುತ್ತದೆ. ನೀರು ತುಂಬಿ ಹರಿಯುವ ಕೆರೆ ಪ್ರದೇಶ ಸಣ್ಣ ನೀರಾವರಿ ಇಲಾಖೆಗೆ ಸೇರುತ್ತದೆ. ಕೆರೆ ಒತ್ತುವರಿ ತೆರವಿಗೆ ಸ್ಥಳೀಯರು ಹಲವಾರು ಸಲ ಅರ್ಜಿ ಸಲ್ಲಿಸಿದ್ದರೂ ಇಲಾಖೆಗಳ ನಿರ್ವಹಣೆ ಕುರಿತಾದ ಗೊಂದಲದಿಂದ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಅಚ್ಚುಕಟ್ಟುದಾರ ಶಂಕರಪ್ಪ.

‘ಬಹುಪಾಲು ಅಚ್ಚುಕಟ್ಟು ಪ್ರದೇಶದಲ್ಲಿ ಭೂಪರಿವರ್ತನೆ ಇಲ್ಲದೇ ಅಕ್ರಮವಾಗಿ ನಿವೇಶನಗಳು ನಿರ್ಮಿಸಲಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶ ಹಾಳಾಗಿ ಕೆರೆಯ ಮೂಲಸ್ವರೂಪವೇ ಇಲ್ಲವಾಗಿದೆ’ ಎಂದು ನಿವೃತ್ತ ಸಂಖ್ಯಾಶಾಸ್ತ್ರಧಿಕಾರಿ ಕೆ.ವೆಂಕಟಪ್ಪ ಕಳವಳ ವ್ಯಕ್ತಪಡಿಸಿದರು.

‘ಈ ಕೆರೆಯ ಮೂಲಕವೇ ಕೆಸಿ ವ್ಯಾಲಿ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಕೆರೆ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ರಾಜಕಾರಣಿಗಳ ಒಣ ಪ್ರತಿಷ್ಠೆಗೆ ಕೆರೆ ಬಲಿಯಾಗಿದೆ’ ಎನ್ನುತ್ತಾರೆ ಕೆರೆ ಅಚ್ಚುಕಟ್ಟುದಾರರು.

ಕೆರೆ ರಕ್ಷಣೆ ಡಿ.ಸಿಗೆ ಮನವಿ

‘ಕೆರೆ ಹಲವಾರು ಜೀವಸಂಕುಲಗಳ ಅವಾಸ ತಾಣ. ಅಲ್ಲದೇ ಇದನ್ನು ಕಲುಷಿತಗೊಳಿಸುತ್ತಿರುವುದರಿಂದ ನೀರಿನಲ್ಲಿರುವ ಜೀವಸಂಕುಲ ಅಲ್ಲದೇ ನಗರವಾಸಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಕೋಲಾರ ಜಿಲ್ಲಾಧಿಕಾರಿಯವರು ಇತ್ತ ಗಮನಹರಿಸಿ ಕೆರೆ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಗೌರವಾಧ್ಯಕ್ಷ ಕೆಂಬೋಡಿ ನಾಗರಾಜ್ ಒತ್ತಾಯಿಸಿದ್ದಾರೆ.

ನಗರಸಭೆ ಸದಸ್ಯ ಎಂ.ಪ್ರಸಾದ್ ಮಾತನಾಡಿ, ‘ಇಂಡ್ಲಕೆರೆ ನಗರಕ್ಕೆ ಅಗತ್ಯವಾಗಿದೆ. ಈ ಕೆರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತ್ಯಾಜ್ಯ ಸುರಿಯದಂತೆ ನಗರದ ಎಲ್ಲಾ ಅಂಗಡಿಗಳವರಿಗೂ ನಗರಸಭೆಯವರು ಸೂಚನೆ ನೀಡಬೇಕು. ನೀರು ಮಾಲಿನ್ಯಗೊಂಡಿದ್ದು ದುರ್ವಾಸನೆ ಬೀರುತ್ತಿದೆ. ಇದರಿಂದ ಸುತ್ತಮುತ್ತಲ ವಾಸಿಗಳ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.