ಬಾಂಗ್ಲಾ ವಲಸಿಗರ ಗಡಿಪಾರಿಗೆ ಒತ್ತಾಯ

7

ಬಾಂಗ್ಲಾ ವಲಸಿಗರ ಗಡಿಪಾರಿಗೆ ಒತ್ತಾಯ

Published:
Updated:
Deccan Herald

ಕೋಲಾರ: ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆ ಸದಸ್ಯರು ಇಲ್ಲಿ ಸೋಮವಾರ ಧರಣಿ ನಡೆಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಸದಸ್ಯರು, ‘ಅಸ್ಸಾಂ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಬಾಂಗ್ಲಾ ನುಸುಳುಕೋರರು ವಾಸವಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಬಾಂಗ್ಲಾ ನುಸುಳುಕೋರರು ದೇಶದ ವಿವಿಧೆಡೆ ಅಕ್ರಮವಾಗಿ ನೆಲೆಸಿದ್ದಾರೆ’ ಎಂದು ದೂರಿದರು.

‘ಬಾಂಗ್ಲಾ ನುಸುಳುಕೋರರಿಂದ ದೇಶದ ಭದ್ರತೆಗೆ ಆತಂಕವಿದೆ. ಇವರು ದೇಶದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಗೆ ಕಂಟಕವಾಗಿದ್ದಾರೆ. ಅಲ್ಲದೇ, ದೇಶದ ಜನರ ಉದ್ಯೋಗಾವಕಾಶ ಕಬಳಿಸುತ್ತಿದ್ದಾರೆ. ರಾಷ್ಟ್ರೀಯತೆ ಸಾಬೀತುಪಡಿಸುವಲ್ಲಿ ವಿಫಲರಾಗಿರುವ ಅವರು ದೇಶ ತೊರೆಯಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್‌ರಾಜ್ ಹೇಳಿದರು.

‘ಬಾಂಗ್ಲಾ ನುಸುಳುಕೋರರಿಗೆ ದೇಶದಲ್ಲಿ ವಾಸಿಸುವ ಹಕ್ಕಿಲ್ಲ. ಹೀಗಾಗಿ ಅವರನ್ನು ದೇಶದಿಂದ ಹೊರ ಹಾಕುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಬೇಕು. ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಅವರನ್ನು ಗಡಿಪಾರು ಮಾಡದಿದ್ದರೆ ದೇಶದೆಲ್ಲೆಡೆ ಹೋರಾಟ ನಡೆಸುತ್ತೇವೆ’ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ವೇಣು, ಪ್ರಧಾನ ಕಾರ್ಯದರ್ಶಿ ವಾಸು ದೇವಾನಂದಸ್ವಾಮಿ, ನಗರ ಘಟಕದ ಅಧ್ಯಕ್ಷ ಪ್ರಭಾಕರ್, ಸದಸ್ಯರಾದ ಭಾರ್ಗವ್, ಆನಂದ್, ಪ್ರವೀಣ್, ನಾಗರಾಜ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !