ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜ್‌ಗೆ ಒತ್ತಾಯ: 6ಕ್ಕೆ ಪ್ರತಿಭಟನೆ

ಪತ್ರಿಕಾಗೋಷ್ಠಿಯಲ್ಲಿ ರೂಪ್ಸ ರಾಜ್ಯ ಘಟಕದ ಉಪಾಧ್ಯಕ್ಷ ಮುನಿಯಪ್ಪ ಹೇಳಿಕೆ
Last Updated 4 ಜನವರಿ 2021, 16:07 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಪ್ಯಾಕೇಜ್ ಘೋಷಣೆ ಸೇರಿದಂತೆ ಸಂಘದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಜ.6ರಂದು ಪ್ರತಿಭಟನೆ ನಡೆಸುತ್ತೇವೆ’ ಎಂದು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರೂಪ್ಸ) ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಮುನಿಯಪ್ಪ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಖಾಸಗಿ ಶಾಲಾ ನೌಕರರು 9 ತಿಂಗಳಿನಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಪ್ರತಿ ನೌಕರರಿಗೆ ತಿಂಗಳಿಗೆ ₹ 10 ಸಾವಿರದಂತೆ 9 ತಿಂಗಳಿಗೆ ಪ್ಯಾಕೇಜ್‌ ನೀಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಗೆ ಕೆಲ ಕಾರ್ಪೊರೇಟ್‌ ಶಾಲೆಗಳು ಬರುತ್ತಿದ್ದು, ಇವುಗಳಿಗೆ ಸರ್ಕಾರ ಅನುಮತಿ ನೀಡಬಾರದು. ಗ್ರಾಮಾಂತರ ಪ್ರದೇಶಕ್ಕೆ ಬಜೆಟ್ ಶಾಲೆಗಳಿದ್ದು, ಕಾರ್ಪೊರೇಟ್‌ ಶಾಲೆಗಳು ಬೇಕಿಲ್ಲ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಇಲ್ಲಸಲ್ಲದ ನಿಯಮ ಹೇರುತ್ತಿದೆ. 9 ತಿಂಗಳಿನಿಂದ ಶಾಲಾ ವಾಹನಗಳ ಸೇವೆ ಸ್ಥಗಿತಗೊಂಡಿರುವುದರಿಂದ ವಿಮೆ, ತೆರಿಗೆ ಉಚಿತವಾಗಿ ಮಾಡಿಸಿಕೊಡಬೇಕು’ ಎಂದು ಕೋರಿದರು.

‘ಸರ್ಕಾರಿ ಶಾಲಾ ಮಕ್ಕಳ ಮೇಲೆ ವರ್ಷಕ್ಕೆ ತಲಾ ₹ 1.04 ಲಕ್ಷ ಖರ್ಚು ಮಾಡುವ ಸರ್ಕಾರ ಖಾಸಗಿ ಶಾಲಾ ಮಕ್ಕಳಿಗೆ ₹ 16 ಸಾವಿರ ಆರ್‌ಟಿಇ ಶುಲ್ಕ ನೀಡಲು ಸತಾಯಿಸುತ್ತಿದೆ. ಶೇ 1ರಷ್ಟು ಆರ್‌ಟಿಇ ಮಕ್ಕಳಿಗೂ ₹ 16 ಸಾವಿರ ಹಣ ಕೊಟ್ಟಿಲ್ಲ. ₹ 5 ಸಾವಿರದಿಂದ ₹ 8 ಸಾವಿರಕ್ಕೆ ಯೋಜನೆ ಮುಕ್ತಾಯ ಆಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಖಾಸಗಿ ಶಾಲೆಗಳಿಂದ ಸಂಗ್ರಹಿಸಿರುವ ₹ 3,860 ಕೋಟಿ ನಿಧಿಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಣ ಬಳಸಲಾಗುತ್ತಿದೆ. ಕೋವಿಡ್‌ ಸಂಕಷ್ಟದಲ್ಲಿ ಆ ಹಣವನ್ನು ಖಾಸಗಿ ಶಾಲಾ ಶಿಕ್ಷಕರಿಗೂ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಮಾನ್ಯತೆ ಕೊಡುತ್ತಿಲ್ಲ: ‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಶೇ 60ರಷ್ಟಿದ್ದರೂ ಸರ್ಕಾರ ಮಾನ್ಯತೆ ಕೊಡುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅತಿ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ’ ಎಂದು ಚಿನ್ಮಯ ವಿದ್ಯಾ ಸಂಸ್ಥೆ ಅಧ್ಯಕ್ಷ ಚಂದ್ರಪ್ರಕಾಶ್ ಕಿಡಿಕಾರಿದರು.

‘ಖಾಸಗಿ ಶಾಲೆಗಳಲ್ಲಿ ವಿದ್ಯಾಗಮಕ್ಕೆ ಶೇ 10ರಷ್ಟು ಮಕ್ಕಳೂ ಹಾಜರಾಗುತ್ತಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಾಂಕ ನಿಗದಿಪಡಿಸಿದ ಸರ್ಕಾರ ಶಾಲೆಗಳಿಗೆ ಈವರೆಗೂ ಪಠ್ಯಕ್ರಮ ಕಡಿತದ ಮಾಹಿತಿ ಒದಗಿಸಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಶಿಕ್ಷಣ ಇಲಾಖೆ ಇನ್ನಾದರೂ ಆದೇಶ ಹೊರಡಿಸಿ ಶಿಕ್ಷಕರಿಗೆ ಪಾಠ ಮಾಡಲು ಅನುವು ಮಾಡಿಕೊಡಬೇಕು’ ಎಂದು ರೂಪ್ಸ ಜಿಲ್ಲಾ ಘಟಕದ ಅಧ್ಯಕ್ಷ ಆದಿಲ್‌ ಪಾಷಾ ಆಗ್ರಹಿಸಿದರು.

ರೂಪ್ಸ ಜಿಲ್ಲಾ ಘಟಕದ ಉಪಾಧ್ಯಕ್ಷ ಶಬರೀಶ್, ಪ್ರಧಾನ ಕಾರ್ಯದರ್ಶಿ ಸರೋಜಾ, ನಿರ್ದೇಶಕ ರಾಜೇಶ್‌ಸಿಂಗ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT