ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉಪಕರಣ ಬೆಲೆ ನಿಯಂತ್ರಣಕ್ಕೆ ಒತ್ತಾಯ

ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘ ಸದಸ್ಯರ ಪ್ರತಿಭಟನೆ
Last Updated 10 ಫೆಬ್ರುವರಿ 2021, 11:31 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಉಪಕರಣ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

ಪ್ರತಿಭಟನಾಕಾರರು ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ಮಲಗಿ ಮಡಿಕೆ, ಆಹಾರ ಪದಾರ್ಥಗಳು, ಕೃಷಿ ಸಲಕರಣೆ ಇಟ್ಟು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ತೈಲೋತ್ಪನ್ನ, ಆಹಾರ ಪದಾರ್ಥಗಳು ಹಾಗೂ ಕೃಷಿ ಉಪಕರಣಗಳ ಬೆಲೆ ಗಗನಕ್ಕೇರಿದೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಾದ ಸರ್ಕಾರಗಳು ಜನಸಾಮಾನ್ಯರನ್ನು ಬೀದಿಗೆ ತಳ್ಳಿ ಶ್ರೀಮಂತರ ಹಿತ ಕಾಯುತ್ತಿವೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಿಡಿಕಾರಿದರು.

‘ಹನಿ ನೀರಾವರಿ ಸಲಕರಣೆಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ರೈತಾಪಿ ವರ್ಗ ಕಂಗಾಲಾಗಿದೆ. ವರ್ಷದ ಹಿಂದೆ ಒಂದು ಎಕರೆ ಜಮೀನಿಗೆ ಹನಿ ನೀರಾವರಿ ಅಳವಡಿಸಲು ₹ 20 ಸಾವಿರ ವೆಚ್ಚವಾಗುತ್ತಿತ್ತು. ಈಗ ₹ 40 ಸಾವಿರ ವೆಚ್ಚವಾಗುತ್ತಿದೆ. ರೈತರಿಗೆ ಕೃಷಿ ನಿರ್ವಹಣೆಯು ದೊಡ್ಡ ಸವಾಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬದುಕು ಬರ್ಬರ: ‘ಕೇಂದ್ರದ ಅಪಕ್ವ ಆರ್ಥಿಕ ನೀತಿಗಳಿಂದ ರೈತರು ಮತ್ತು ಜನಸಾಮಾನ್ಯರ ಬದುಕು ಬರ್ಬರವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತೈಲ ಕಂಪನಿಗಳು ಬಡ ಜನರ ಹಣ ಲೂಟಿ ಮಾಡುತ್ತಿವೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಬೇಳೆ ಕಾಳು, ಅಕ್ಕಿ, ಅಡುಗೆ ಎಣ್ಣೆಯಂತಹ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ದುಡಿಮೆಯ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೇಂದ್ರವು ಕೊರೊನಾ ಸಂಕಷ್ಟದಲ್ಲಿರುವ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಕೃಷಿ ಉಪಕರಣಗಳ ಬೆಲೆ ಏರಿಕೆಯಿಂದ ರೈತರು ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ದೂರಿದರು.

ರಾಷ್ಟ್ರೀಕರಣಗೊಳಿಸಿ: ‘ಸರ್ಕಾರಗಳು ಕೃಷಿ ವಿರೋಧಿ ನೀತಿ ಕೈಬಿಟ್ಟು ಜನಪರವಾಗಿ ನಡೆದುಕೊಳ್ಳಬೇಕು. ಪೈಪ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಕಡಿಮೆ ಮಾಡಬೇಕು. ತೈಲೋತ್ಪನ್ನ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್‌, ಸದಸ್ಯರಾದ ಸುಪ್ರೀಂಚಲ, ಚಲಪತಿ, ಚಾಂದ್‌ಪಾಷಾ, ಜಾವೇದ್‌ ಪಾಷಾ, ಕಿರಣ್, ನಾಗೇಶ್, ವೆಂಕಟೇಶಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT