ಸೋಮವಾರ, ಏಪ್ರಿಲ್ 6, 2020
19 °C
ಗ್ರಾಮ ಪಂಚಾಯಿತಿ ನೌಕರರಿಂದ ಜಿ.ಪಂ ಎದುರು ಧರಣಿ

ಕೋಲಾರ: ಬಾಕಿ ವೇತನ ಬಿಡುಗಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಸಂಘ ಜಿಲ್ಲಾ ಘಟಕದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈವರೆಗೂ ವೇತನ ಬಿಡುಗಡೆ ಮಾಡಿಲ್ಲ. ವೇತನವನ್ನೇ ನಂಬಿ ಬದುಕು ಸಾಗಿಸುತ್ತಿರುವ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗ್ರಾ.ಪಂ ಮಟ್ಟದ ಅಧಿಕಾರಿಗಳು ಸಕಾಲಕ್ಕೆ ವೇತನ ಕೊಡದೆ ನೌಕರರನ್ನು ವಂಚಿಸುತ್ತಿದ್ದಾರೆ. ನೌಕರರು ಬಡ್ಡಿ ಸಾಲ ಮಾಡಿ ಬದುಕು ಸಾಗಿಸುತ್ತಿದ್ದಾರೆ. ನೌಕರರಿಗೆ ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ವೇತನ ಕೊಡಲಾಗುತ್ತಿದೆ. ಅಧಿಕಾರಿಗಳು ನೌಕರರ ವೇತನದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರಿ ನೌಕರರಂತೆ ಗ್ರಾಮ ಪಂಚಾಯಿತಿ ನೌಕರರಿಗೂ ವೈದ್ಯಕೀಯ ವೆಚ್ಚ ಕಲ್ಪಿಸಬೇಕು, ಬಿಪಿಎಲ್ ಪಡಿತರ ಚೀಟಿಗೆ ಅವಕಾಶ ಕಲ್ಪಿಸಬೇಕು. ಕಾರ್ಯದರ್ಶಿಗಳ ವರದಿಯಂತೆ ನೌಕರರನ್ನು ಏಕಕಾಲದಲ್ಲಿ ಅನುಮೋದನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ವೇತನ ತಾರತಮ್ಯ ಹೋಗಲಾಡಿಸಲು 14ನೇ ಹಣಕಾಸು ಯೋಜನೆಯಲ್ಲಿನ ಅನುದಾನದಲ್ಲಿ ಶೇ.10ರಷ್ಟು ಹಣವನ್ನು ನೌಕರರಿಗೆ ವೇತನಕ್ಕೆ ಉಪಯೋಗಿಸಬೇಕು. ನಿವೃತ್ತ ನೌಕರರಿಗೂ ತೆರಿಗೆ ಸಂಗ್ರಹದಲ್ಲಿ ಶೇ.40ರಷ್ಟು ನಿವೃತ್ತಿ ವೇತನ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ’ ಎಂದು ದೂರಿದರು.

‘ಕೆಲ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಶಾಮೀಲಾಗಿ ನೌಕರರ ವಿರುದ್ಧ ವಿನಾಕಾರಣ ದೂರು ದಾಖಲಿಸಿದ್ದಾರೆ. ಪಿಡಿಒಗಳು ನೌಕರರಿಂದ ದಾಖಲೆಪತ್ರಗಳಿಗೆ ಕಾನೂನುಬಾಹಿರವಾಗಿ ಸಹಿ ಹಾಕಿಸಿಕೊಂಡು ಅರೆಕಾಲಿಕ ನೌಕರರೆಂದು ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಮರ ನಾರಾಯಣಪ್ಪ ಮಾತನಾಡಿ, ‘ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್‌ಗಳನ್ನು ಮುಖ್ಯ ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಿಬೇಕು. ಬಿಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್ 2 ಕಾರ್ಯದರ್ಶಿ ಮತ್ತು ಲೆಕ್ಕಸಹಾಯಕ ಹುದ್ದೆಗೆ ಬಡ್ತಿ ನೀಡಲು 2019ರ ಜೇಷ್ಠತಾ ಪಟ್ಟಿ ಸಿದ್ಧಪಡಿಸಲಾಗಿದೆ. ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಪಿಡಿಒ ಬಡ್ತಿ ಹಾಗೂ ಗ್ರೇಡ್ 4 ಬಡ್ತಿ ನೀಡಿ, ಖಾಲಿಯಾದ ಗ್ರೇಡ್ 2 ಕಾರ್ಯದರ್ಶಿ ಮತ್ತು ಲೆಕ್ಕಸಹಾಯಕ ಹುದ್ದೆಗೆ ನೇಮಕಾತಿ ಮಾಡುವಂತಾಗಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ವಿಜಿಕೃಷ್ಣಮ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಕೇಶವರಾವ್, ರೈತ ಸಂಘದ ಎನ್.ಎನ್.ಶ್ರೀರಾಮ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು