ಕೋಲಾರ: ಕೋವಿಡ್ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಘೋಷಿಸಿದ ಪರಿಹಾರ ಪ್ಯಾಕೇಜ್‌ನ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಸಿಐಟಿಯು ನೇತೃತ್ವದಲ್ಲಿ ಇಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಘೋಷಿಸಿದ ಪರಿಹಾರ ಪ್ಯಾಕೇಜ್‌ನ ಹಣ ಈವರೆಗೂ ಫಲಾನುಭವಿಗಳ ಕೈಸೇರಿಲ್ಲ. ಅಧಿಕಾರಿಗಳು ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಲಾಕ್‌ಡೌನ್‌ನಿಂದ ಕಟ್ಟಡ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸಿದರು. ಎಲ್ಲೆಡೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದರಿಂದ ದುಡಿಮೆ ಇಲ್ಲದೆ ಕಾರ್ಮಿಕರು ಜೀವನ ನಿರ್ವಹಣೆಗೆ ಪರಿತಪಿಸಿದರು’ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಹೇಳಿದರು.
‘ಮೊದಲ ಲಾಕ್‌ಡೌನ್‌ನಿಂದ ಕಟ್ಟಡ ನಿರ್ಮಾಣ ಕ್ಷೇತ್ರ ಚೇತರಿಕೆ ಕಾಣುತ್ತಿತ್ತು. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್ ಘೋಷಿಸಿದ್ದರಿಂದ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ಸಾವಿರಾರು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ’ ಎಂದರು.
ಜೀವನ ಕಷ್ಟ: ‘ಕೋವಿಡ್ ಭೀತಿಯ ಕಾರಣಕ್ಕೆ ಕೆಲಸವಿಲ್ಲದೆ ಸಂಪಾದನೆ ಕುಂಠಿತಗೊಂಡಿರುವುದರಿಂದ ಕಾರ್ಮಿಕರ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ದುಡಿಮೆ ಇಲ್ಲದ ಕಾರಣ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಆದರೂ ಸರ್ಕಾರ ಕಟ್ಟಡ ಕಾರ್ಮಿಕರ ಹಿತರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಣದಲ್ಲಿ ವಿತರಿಸುತ್ತಿರುವ ದಿನಸಿ ಕಿಟ್‌ಗಳ ಮೇಲೆ ಬಿಜೆಪಿಯ ಶಾಸಕರ ಫೋಟೊ ಅಂಟಿಸಿ ಹಂಚುತ್ತಿರುವುದು ಸರಿಯಲ್ಲ. ರಾಜಕೀಯ ಲಾಭಕ್ಕೆ ಮಂಡಳಿ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಂಡಳಿಯ ನಿಯಾಮಾವಳಿ ಗಾಳಿಗೆ ತೂರಿ ಮನಸೋಇಚ್ಛೆ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಕಾನೂನಿನ ಉಲ್ಲಂಘನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತಷ್ಟು ಕಷ್ಟ: ‘ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ಘೋಷಣೆಯಾಗಿದ್ದ ₹ 5 ಸಾವಿರ ಪರಿಹಾರದ ಮೊತ್ತವನ್ನು ಶೀಘ್ರವೇ ಕಾರ್ಮಿಕರಿಗೆ ಕೊಡಬೇಕು. ದೇಶದಲ್ಲಿ ಕೋವಿಡ್ 3ನೇ ಅಲೆ ಬರಲಿದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಭವಿಷ್ಯದ ದಿನಗಳು ಮತ್ತಷ್ಟು ಕಷ್ಟಕರವಾಗಿರುತ್ತವೆ. ಕಾರ್ಮಿಕರ ಕಷ್ಟ ಅರಿತು ಮಾಸಿಕ ₹ 10 ಸಾವಿರದಂತೆ ಮೂರು ತಿಂಗಳು ಪರಿಹಾರಧನ ನೀಡಬೇಕು. ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಪರಿಹಾರದಿಂದ ವಂಚಿತರಾಗಿರುವ 1 ಲಕ್ಷ ಕಾರ್ಮಿಕರಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ಕೋವಿಡ್‌ನಿಂದ ಮೃತಪಟ್ಟ ಕಟ್ಟಡ ಕಾರ್ಮಿಕರಿಗೆ ತಲಾ ₹ 10 ಲಕ್ಷ ಪರಿಹಾರ ಕೊಡಬೇಕು. ಕೊರೊನಾ ಸೋಂಕಿತ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಕಾರ್ಮಿಕರಿಗೆ ವಿತರಿಸುವ ಪಡಿತರ ಕಿಟ್ ಮತ್ತು ನಿರ್ಮಾಣ ಸಾಮಗ್ರಿಗಳ ಕಿಟ್ ಖರೀದಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಭೀಮರಾಜ್, ಸಹ ಕಾರ್ಯದರ್ಶಿ ಆಶಾ, ಸದಸ್ಯರಾದ ಸುಶೀಲಾ, ನಾರಾಯಣಮ್ಮ, ಸುನಂದಾ, ರಾಮಚಂದ್ರಪ್ಪ, ನಾರಾಯಣಪ್ಪ, ಮಾದೇಶ್ ಪಾಲ್ಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.