ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ

ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸೂಚನೆ
Last Updated 21 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸರ್ಕಾರದಿಂದ ಪ್ರತಿ ಶಾಲೆಗೂ ಅನುದಾನ ಬಿಡುಗಡೆಯಾಗಿದೆ. ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಿ ಘಟಕ ನಿರ್ಮಾಣಕ್ಕೆ ಮುಂದಾಗಿ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 1,085 ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಸ್ಥಾಪನೆ ಮಾಡಬೇಕಾದ ಅಗತ್ಯವಿದೆ. ಅಂರ್ಜಲ ಮಟ್ಟ ಪಾತಳಕ್ಕೆ ಕುಸಿದಿದ್ದು, ಫ್ಲೋರೈಡ್ ನೀರು ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

‘ಕೆಲ ಶಾಲೆಗಳಲ್ಲಿ ಕುಡಿಯಲು ಮತ್ತು ಉಪ ಯೋಗಿಸಲು ನೀರಿಲ್ಲ, ಮಕ್ಕಳಿಂದ ತರಿಸಿಕೊಳ್ಳುವ ಪರಿಸ್ಥಿತಿಯಿದೆ, ಇತ್ತೀಚಿಗೆ ನಾನು ಶಾಲೆಗಳಿಗೆ ಭೇಟಿ ನೀಡಿದಾಗ ಸಾಕಷ್ಟು ಸಮಸ್ಯೆಗಳು ಕಂಡು ಬಂದಿವೆ. ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದರು.

‘ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ಜಿ.ಪಂ ಸದಸ್ಯರಿಗೆ ₨ 3 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಜತೆಗೆ ₨ 1 ಕೋಟಿ ಬಿಡುಗಡೆ ಮಾಡಲಾಗಿದೆ. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಕೊಳವೆಬಾವಿ ಕೊರೆಸುವ ಮೊದಲು ನೀರು ಲಭ್ಯವಾಗುತ್ತದೆ ಇಲ್ಲವೊ ಎಂಬುದರೆ ಬಗ್ಗೆ ಖಾತರಿ ಮಾಡಿಸಿಕೊಳ್ಳಬೇಕು, ಅನುಮಾನ ಇದ್ದರೆ ಕೊರೆಸಬೇಡಿ, ರೈತರ ಕೊಳವೆಬಾವಿಯನ್ನು ಬಾಡಿಗೆಗೆ ಪಡೆದುಕೊಂಡು ನೀರು ಸರಬರಾಜು ಮಾಡಬೇಕು’ ಎಂದು ಸಲಹೆ ನೀಡಿದರು.

‘ನೀರಿನ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರಬಾರದು. ಬೇಸಿಗೆ ಕಾಲ ಆರಂಭವಾಗಿದ್ದು ಗಂಭೀರದಿಂದ ಕೆಲಸ ಮಾಡಬೇಕು. ಜಿ.ಪಂ ಸದಸ್ಯರು ನೀರಿನ ವಿಚಾರದಲ್ಲಿ ದೂರು ನೀಡಿದರೆ ಸಹಿಸುವುದಿಲ್ಲ. ಹಣ ದುರುಪಯೋಗವಾದರೆ ಅಧಿಕಾರಿಗನ್ನು ಹೊಣೆ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿ.ಪಂ ಉಪಾಧ್ಯಕ್ಷೆ ಉಪಾಧ್ಯಕ್ಷೆ ಯಶೋದಮ್ಮ ಮಾತನಾಡಿ, ‘ಮಾಲೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸಿದರು ನೀರು ಲಭ್ಯವಾಗಿಲ್ಲ. ಕೆ.ಜಿ.ಹಳ್ಳಿ, ಊರುಗುರಿಕಿ ಗ್ರಾ.ಪಂ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ, ಕೂಡಲೇ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ಸೂಚಿಸಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ ದರ್ಶನ್ ಮಾತನಾಡಿ, ‘ಕೆಸಿ ವ್ಯಾಲಿ ಯೋಜನೆಯಿಂದ ಇದುವರೆಗೂ 50 ಕೆರೆಗಳು ತುಂಬಿ ಕೋಡಿ ಹರಿದಿದ್ದು, ಈ ಭಾಗದಲ್ಲಿ ಕೊಳವೆಬಾವಿಗಳು ಮರುಪೂರ್ಣಗೊಂಡಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವ ವಿದ್ಯಾರ್ಥಿನಿಲಯ, ಶಾಲೆಗಳ ಪಟ್ಟಿ ಪಡೆದು ಗ್ರಾ.ಪಂ ವತಿಯಿಂದ ಪೈಪ್‌ ಲೈನ್ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು, ನೀರಿನ ಸಮಸ್ಯೆ ಕುರಿತು ಪ್ರತಿ ವಾರ ಗ್ರಾ.ಪಂ ಅಧಿವೃದ್ಧಿ ಅಧಿಕಾರಿಗಳಿಂದ ವರದಿ ತರೆಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT