ಶುಕ್ರವಾರ, ಫೆಬ್ರವರಿ 21, 2020
28 °C
ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌ ಸೂಚನೆ

ನಕಲಿ ಗುರುತಿನ ಚೀಟಿ ವಿತರಣೆ: ಕ್ರಿಮಿನಲ್ ಪ್ರಕರಣ ದಾಖಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಕಲಿ ಅಂಗವಿಕಲ ಗುರುತಿನ ಚೀಟಿ ಮಾಡಿಸಿಕೊಟ್ಟಿರುವ ಅಧಿಕಾರಿಗಳ ಮತ್ತು ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಗವಿಕಲರ ಕುಂದುಕೊರತೆಗಳ ಸಭೆಯಲ್ಲಿ ಅಹಲವಾಲುಗಳನ್ನು ಅಲಿಸಿ ಮಾತನಾಡಿ, ‘ನಕಲಿ ಚೀಟಿಗಳನ್ನು ಪಡೆದುಕೊಂಡು ಸೌಕರ್ಯಗಳನ್ನು ಪಡೆದುಕೊಂಡು ಸರ್ಕಾರವನ್ನು ವಂಚಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಅಂಗವಿಕಲರಿಗೆ ಗುರುತಿನ ಚೀಟಿ ಕಾರ್ಡ್ ವಿತರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಾರ್ವಜನಿಕರ ಆಸ್ಪತ್ರೆಗಳಲ್ಲಿ ಆಗಬೇಕಾಗಿದೆ. ಜಿಲ್ಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳಲ್ಲಿ ಅನುದಾನದಲ್ಲಿ ಶೇ.೫ರಷ್ಟು ಅನುದಾನವನ್ನು ಮೀಸಲಿಡುವ ಬಗ್ಗೆ ಮಾರ್ಗಸೂಚಿಗಳನ್ನು ಎಲ್ಲಾ ಅಧಿಕಾರಿಗಳು ಪಾಲಿಸಬೇಕು’ ಎಂದು ತಿಳಿಸಿದರು.

‘ಕೆಡಿಪಿ ಮತ್ತು ಸಾಮಾನ್ಯ ಸಭೆಗಳಿಗೆ ಗ್ರಾಮೀಣ, ನಗರ ಹಾಗೂ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಆಹ್ವಾನಿಸುತ್ತಿಲ್ಲ. ಪ್ರತಿ ಇಲಾಖೆಯ ಕಚೇರಿ ಮುಂದೆ ರ್‌್ಯಾಂಪ್ ನಿರ್ಮಿಸಲು ಸೂಚಿಸಬೇಕು’ ಎಂದು ಅಂಗವಿಕಲ ರಾಜೇಶ್‌ ಮನವಿ ಮಾಡಿದರು.

‘ಪ್ರತಿ ಎರಡು ತಿಂಗಳಿಗೊಮ್ಮೆ ಅಂಗವಿಕಲರ ಕುಂದು ಕೊರತೆ ಸಭೆ ನಡೆಸಬೇಕು ಎಂದು ಸರ್ಕಾರದ ಸುತ್ತೋಲೆಯಿದ್ದರೂ ಶಿಶು ಅಭಿವೃದ್ಧಿ ಅಧಿಕಾರಿಗಳು ಕೆಲಸದ ಒತ್ತಡ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ನಾವು ಅವಕಾಶ ವಂಚಿತರಾಗುತ್ತಿದ್ದೆವೆ’ ಎಂದು ಅಳಲು ತೊಡಿಕೊಂಡರು.

ಇದಕ್ಕೆ ಸ್ಪಂದಿಸಿದ ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ‘ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ. ಈಗ ಹೇಳಿರುವ ಸಮಸ್ಯೆಗಳು ಒಂದು ಕಾಲ ಮಿತಿಯೊಳಗೆ ಬಗೆಹರಿಯದಿದ್ದರೆ ಪುನಃ ಸಭೆ ಕರೆದು ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಅಧಿಕಾರಿಗಳು ಕರ್ತವ್ಯದ ಜತೆಗೆ ಮಾನವಿಯತೆಯನ್ನು ಅಳವಡಿಸಿಕೊಂಡು ಕೆಲಸ ನಿರ್ವಹಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಕರ್ಯ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಬೇಕು’ ಎಂದು ಸೂಚಿಸಿದರು.

‘ಫೆ.೧೧ ಮತ್ತು ೧೨ರಂದು ಎರಡು ದಿನಗಳು ಸಿಬಿಐಟಿ ಮಹಾವಿದ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಸುಮಾರು ೧೫೦ ಕಂಪನಿಗಳು ಭಾಗವಹಿಸಲಿದೆ. ವಿಶೇಷಚೇತನರಿಗೆ ಉದ್ಯೋಗದಲ್ಲಿ ಮೀಸಲಾತಿ ಇರುವ ಅವಕಾಶವನ್ನು ಆರ್ಹರು ಸದ್ಬಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳಲ್ಲಿ ಅಂಗವಿಕಲರಿಗೆ ಬಹಳಷ್ಟು ಸಮಸ್ಯೆಗಳಿದ್ದು ತಪಾಸಣೆಗೆ ವಿಶೇಷ ದಿನ ಮತ್ತು ಕೊಠಡಿಯನ್ನು ಹಾಗೂ ತಜ್ಞವೈದ್ಯರನ್ನು ನೇಮಿಸುವ ವ್ಯವಸ್ಥೆಯನ್ನು ಮಾಡಬೇಕು’ ಎಂದು ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಅವರಿಗೆ ಸೂಚಿಸಿದರು.

‘ಅಂಗವಿಕಲತೆಯ ಪ್ರಮಾಣವನ್ನು ಗುರುತಿಸುವಲ್ಲಿ ಕೆಲವು ವೈದ್ಯರ ಕರ್ತವ್ಯದಲ್ಲಿ ಲೋಪದೋಷಗಳ ಆರೋಪಗಳು ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸಂಬಂಧ ಪಟ್ಟ ವೈದ್ಯರನ್ನು ಎಚ್ಚರಿಸಬೇಕು. ಪ್ರಮಾಣಿಕವಾಗಿ ಅರ್ಹರಿಗೆ ಗುರುತಿನ ಚೀಟಿ ನೀಡಬೇಕು’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಎಂ.ಎನ್.ಪಾಲಿ, ಜಿ.ಪಂ ಯೋಜನಾ ನಿರ್ದೇಕ ಮಾದೇಶ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಗದೀಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)