ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು | ಜನತಾ ದರ್ಶನ: 145 ಅರ್ಜಿ ಸ್ವೀಕಾರ

Published 29 ನವೆಂಬರ್ 2023, 16:30 IST
Last Updated 29 ನವೆಂಬರ್ 2023, 16:30 IST
ಅಕ್ಷರ ಗಾತ್ರ

ಮುಳಬಾಗಿಲು: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಮುಳಬಾಗಿಲು ನಗರದ ಡಿವಿಜಿ ಗಡಿ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ 145 ಅರ್ಜಿಗಳು ಸ್ವೀಕೃತಗೊಂಡಿವೆ.

ಸಾರ್ವಜನಿಕರು ಶಿಕ್ಷಣ ಇಲಾಖೆಗೆ 4, ನಗರಸಭೆಗೆ ಸಂಭಂದಿಸಿದಂತೆ 9, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 8, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಒಂದು, ಬೆಸ್ಕಾಂ ಒಂದು, ಅಬಕಾರಿ ನಾಲ್ಕು, ಅರಣ್ಯ ಒಂದು, ಕೃಷಿ ಇಲಾಖೆ ಒಂದು, ತಾಲ್ಲೂಕು ಪಂಚಾಯಿತಿಗಳಿಗೆ ಸಂಭಂದಿಸಿದ 20, ಸಮಾಜ ಕಲ್ಯಾಣ ಒಂದು ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 95 ಅರ್ಜಿ ಸೇರಿ ಒಟ್ಟು 145 ಅಹವಾಲುಗಳು ಸ್ವೀಕಾರಗೊಂಡಿವೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ಕೃಷಿ, ತೋಟಗಾರಿಕಾ, ನೀರು ಸರಬರಾಜು ಮಂಡಳಿ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂತಾದ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಿಂದ ಸಿಗುವ ಸೌಲಭ್ಯ ಹಾಗೂ ಕೆಲವು ಸಲಕರಣೆಗಳನ್ನು ಪ್ರದರ್ಶನಕ್ಕೆ ಇಟ್ಟು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜನತಾ ದರ್ಶನ ಕಾರ್ಯಕ್ರಮ ಮಾಡುತ್ತಿದ್ದು, ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೀಡುವ ಅಹವಾಲುಗಳನ್ನು 15 ದಿನದ ಒಳಗೆ ಪರಿಹರಿಸಲಾಗುವುದು. ಜತೆಗೆ ತನ್ನ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಸಾರ್ವಜನಿಕರು ತಾವು ಇರುವ ಸ್ಥಳದಲ್ಲಿಯೇ ತಿಳಿಯಬಹುದು ಎಂದರು.

ಜಿಲ್ಲೆಯಲ್ಲಿ ಬಹುತೇಕ ಶೇ 50 ರಷ್ಟು ಕಂದಾಯ ಇಲಾಖೆ ಸಮಸ್ಯೆಗಳಿವೆ. ಖಾತೆಗಳಿಗೆ ಸಂಭಂದಿಸಿದ ಸಮಸ್ಯೆಯಲ್ಲಿ ಜಿಲ್ಲೆ 30 ಸ್ಥಾನದಲ್ಲಿದ್ದು, ಇದನ್ನು ತ್ವರಿತ ಗತಿಯಲ್ಲಿ ಪರಿಹರಿಸಲಾಗುವುದು. 

ಆರು ತಿಂಗಳಲ್ಲಿ 2,000 ಪವತಿ ಖಾತೆಗಳ ಸಮಸ್ಯೆಯನ್ನು ಪರಿಹರಿಸಿ ಕಂದಾಯ ಇಲಾಖೆಯನ್ನು ಉನ್ನತೀಕರಿಸಲಾಗಿದೆ. ಪಿ.ಎಂ.ಕಿಸಾನ್ ಯೋಜನೆಯಲ್ಲಿ ಶೇ 96 ರಷ್ಟು ಸಾಧನೆ ಮಾಡಲಾಗಿದೆ. 26 ಸಾವಿರ ಮಂದಿ ರೈತರಿಗೆ ಪಿ.ಎಂ.ಕಿಸಾನ್ ಹಣ ಸಿಗುತ್ತಿರಲಿಲ್ಲ. ಇಕೆವೈಸಿ ಇಂದ 32 ಸಾವಿರ ಮಂದಿಗೆ ಸೌಲಭ್ಯ ಸಿಗುವಂತೆ ಮಾಡಲಾಗಿದೆ. 25 ಸಾವಿರ ಮಂದಿಗೆ ಪಿಂಚಣಿ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಪಹಣಿ ಮತ್ತು ಬ್ಯಾಂಕ್ ಖಾತೆಗಳನ್ನು ಜೋಡಿಸಿದರೆ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದ ರೈತರ ಬೆಳೆಗಳು ನಾಶವಾದರೆ ಪರಿಹಾರ ಸಿಗುವ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ವಿಶ್ವಕರ್ಮ ಯೋಜನೆಯಲ್ಲಿ ಈಗಾಗಲೇ 36 ಸಾವಿರ ಅರ್ಜಿಗಳು ಬಂದಿದ್ದು, ನಗರ ಪ್ರದೇಶದ 8 ಸಾವಿರ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಗ್ರಾಮಾಂತರ ಪ್ರದೇಶದ ಅರ್ಜಿಗಳಿಗೆ ಸಂಭಂದಿಸಿದಂತೆ ತಾಂತ್ರಿಕ ಸಮಸ್ಯೆಯಾಗಿದೆ ಎಂದರು.

ಜಿಲ್ಲೆಯಲ್ಲಿ ಡಿ. 2 ಮತ್ತು 3 ರಂದು ಮತದಾರರ ಸೇರ್ಪಡೆ ಹಾಗೂ ಮತದಾನದ ಕುರಿತು ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಇವಿಎಂ.ಯಂತ್ರ, ಮತದಾನ ಹಾಕುವ ಮತ್ತು ಹಾಕಿದ ಮತಗಳ ಲೆಕ್ಕ ಮುಂತಾದವುಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು.

ಸಹಾಯಕ ಜಿಲ್ಲಾಧಿಕಾರಿ ಶಂಕರ್ ವಡಿಕಳ್, ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ, ಜಿಲ್ಲಾ ಸರ್ವೆ ಅಧಿಕಾರಿ ಭಾಗ್ಯಮ್ಮ, ತಹಶೀಲ್ದಾರ್ ಟಿ.ರೇಖಾ, ಗ್ರೇಡ್ 2 ತಹಶೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ, ಇ.ಒ.ಸರ್ವೇಶ್, ಡಿವೈಎಸ್‌ಪಿ ನಂದಕುಮಾರ್ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದರು.

ಮತದಾರರು ಸೇರ್ಪಡೆಗೆ ಡಿ.9 ಕೊನೆ ದಿನ 

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಈಗಾಗಲೇ ಜಿಲ್ಲೆಯಲ್ಲಿ ನೂತನ ಮತದಾರರ ಸೇರ್ಪಡೆ ತಿದ್ದುಪಡಿ ಮಾಡಲು ಡಿ.9 ಕೊನೆ ದಿನಾಂಕವಾಗಿದೆ. ಹಾಗಾಗಿ ಎಲ್ಲರೂ ನೋಂದಣಿ ಮಾಡಿಕೊಂಡು ಮತದಾನ ಮಾಡಿ. ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಚುನಾವಣಾ ಸಿಬ್ಬಂದಿ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 40 ಸಾವಿರ ಮಂದಿ ನೂತನ ಮತದಾರರ ಸೇರ್ಪಡೆ ಕಾರ್ಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.

ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ಬಗ್ಗೆ ಜಿಲ್ಲೆಯ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದೆ ಕಾಟಚಾರಕ್ಕೆ ಕೇವಲ ಒಂದೇ ಗಂಟೆಯಲ್ಲಿ ಕಾರ್ಯಕ್ರಮ ಮುಗಿಸಿದ್ದಾರೆ.
ಯಲವಹಳ್ಳಿ ಪ್ರಭಾಕರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ
ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಅಹವಾಲುಗಳನ್ನು ಸಲ್ಲಿಸಿದರು
ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಅಹವಾಲುಗಳನ್ನು ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT