ಬುಧವಾರ, ಫೆಬ್ರವರಿ 19, 2020
24 °C
ವಿವಿಧ ಕಂಪನಿಗಳು ಭಾಗಿ

ಬೃಹತ್‌ ಉದ್ಯೋಗ ಮೇಳ: 1,500 ಮಂದಿಗೆ ಸ್ಥಳದಲ್ಲೇ ಆದೇಶಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಕೇಂದ್ರದಲ್ಲಿ 2 ದಿನಗಳ ಕಾಲ ನಡೆದ ಉದ್ಯೋಗ ಮೇಳಕ್ಕೆ ಬುಧವಾರ ತೆರೆ ಬಿದ್ದಿದ್ದು, ಸುಮಾರು 1,500 ಮಂದಿ ನಿರುದ್ಯೋಗಿಗಳು ಮೇಳದಲ್ಲಿ ಪಾಲ್ಗೊಂಡು ಉದ್ಯೋಗಾವಕಾಶ ಗಿಟ್ಟಿಸಿಕೊಂಡರು.

ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೆಗಳು, ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಗಳು, ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಫೈನಾನ್ಸ್‌, ಇನ್ಶೂರೆನ್ಸ್‌, ಜವಳಿ, ಪ್ರತಿಷ್ಠಿತ ಕೈಗಾರಿಕೆಗಳು, ಆಟೊ ಮೊಬೈಲ್ಸ್‌ ಮತ್ತು ಇತರೆ ವಲಯ ಸೇರಿದಂತೆ 250 ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ ಪಾಲ್ಗೊಂಡು ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿ­ ಸಂದರ್ಶನ ನಡೆಸಿದರು.

ಒಟ್ಟಾರೆ 2 ದಿನದ ಮೇಳದಲ್ಲಿ 18 ಸಾವಿರಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡರು. ಕೆಲವರು ಆನ್‌ಲೈನ್‌ ಮೂಲಕ ಮುಂಚಿತವಾಗಿ ಮೇಳಕ್ಕೆ ಹೆಸರು ನೋಂದಾಯಿಸಿದ್ದರು. ಮತ್ತೆ ಕೆಲ ಉದ್ಯೋಗ ಆಕಾಂಕ್ಷಿಗಳು ಸ್ಥಳದಲ್ಲೇ ಹೆಸರು ನೋಂದಾಯಿಸಿ ಮೇಳದಲ್ಲಿ ಸಂದರ್ಶನಕ್ಕೆ ಹಾಜರಾದರು. ಈ ಪೈಕಿ 1,500 ಮಂದಿಯನ್ನು ಕಂಪನಿಗಳ ಪ್ರತಿನಿಧಿಗಳು ಕೆಲಸಕ್ಕೆ ಆಯ್ಕೆ ಮಾಡಿ ಸ್ಥಳದಲ್ಲೇ ನೇಮಕಾತಿ ಆದೇಶಪತ್ರ ನೀಡಿದರು.

ಸುಮಾರು 4 ಸಾವಿರ ಅಭ್ಯರ್ಥಿಗಳನ್ನು ಕಾಯ್ದಿರಿಸಿದ ಪಟ್ಟಿಗೆ ಸೇರಿಸಲಾಗಿದ್ದು, ಅವರಿಗೆ ಸದ್ಯದಲ್ಲೇ ಕೆಲಸದ ಆದೇಶಪತ್ರ ಕಳುಹಿಸುವುದಾಗಿ ಕಂಪನಿ ಪ್ರತಿನಿಧಿಗಳು ಭರವಸೆ ನೀಡಿದರು. ಮೇಳದಲ್ಲಿ ಉದ್ಯೋಗಾವಕಾಶ ಸಿಗದೆ ಬೇಸರಗೊಂಡ ಅಭ್ಯರ್ಥಿಗಳು ನಿರಾಸೆಯಿಂದ ಮನೆಗೆ ಹಿಂದಿರುಗಿದರು.

ಸ್ವಾವಲಂಬಿಗಳಾಗಿ: ಮೇಳದಲ್ಲಿ ಉದ್ಯೋಗ ಪಡೆದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಪತ್ರ ವಿತರಿಸಿ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ, ‘ನಿರುದ್ಯೋಗಿಗಳಿಗೆ ಸಮಾಜದಲ್ಲಿ ಬದುಕು ರೂಪಿಸಿಕೊಳ್ಳಲು ಮೇಳವು ಅಗತ್ಯ ಉದ್ಯೋಗಾವಕಾಶ ಕಲ್ಪಿಸಿದೆ. ಉದ್ಯೋಗ ಪಡೆದವರು ಸ್ವಾವಲಂಬಿಗಳಾಗಿ ಬದುಕಬೇಕು’ ಎಂದು ಆಶಿಸಿದರು.

‘ಜಿಲ್ಲೆಯಲ್ಲಿ ಬರಗಾಲವಿದ್ದರೂ ಪ್ರತಿಭೆಗಳಿಗೆ ಬರವಿಲ್ಲ. ರಾಜ್ಯದ ಯಾವುದೇ ಜಿಲ್ಲೆಗೆ ಹೋದರೂ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯ ವಿದ್ಯಾವಂತರು ಹೆಚ್ಚಾಗಿ ಸಿಗುತ್ತಾರೆ. ಪದವೀಧರರಾಗಿ ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸಲಾಯಿತು’ ಎಂದು ವಿವರಿಸಿದರು.

‘ಜಿಲ್ಲೆಯ ಮಾಲೂರು, ನರಸಾಪುರ, ವೇಮಗಲ್‌ನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿದ್ದರೂ ಕೈಗಾರಿಕೆಗಳು ಹಾಗೂ ಕಂಪನಿಗಳು ನಿರೀಕ್ಷಿತ ಮಟ್ಟದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ. ಇದರಿಂದ ಸ್ಥಳೀಯರು ಉದ್ಯೋಗ ವಂಚಿತರಾಗಿದ್ದಾರೆ. ಕೌಶಲ ವಿಕಾಸ್ ಯೋಜನೆಯಡಿ ವಿದ್ಯಾವಂತರಿಗೆ ಕೌಶಲ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲು ಒತ್ತು ನೀಡಲಾಗುವುದು’ ಎಂದರು.

ಸ್ವಉದ್ಯೋಗ: ‘ವಿದ್ಯಾವಂತರಾದ ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸ ಸಿಗುವುದು ಕಷ್ಟ. ಸದ್ಯ ಅವಕಾಶ ಸಿಕ್ಕ ಕ್ಷೇತ್ರದಲ್ಲಿ ದುಡಿದು ಜೀವನ ರೂಪಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಸ್ವಉದ್ಯೋಗ ಕೈಗೊಳ್ಳುವ ಮೂಲಕ ಬೇರೆಯವರಿಗೂ ಕೆಲಸ ನೀಡಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹುದು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಉಪ ವಿಬಾಗಾಧಿಕಾರಿ ಸೋಮಶೇಖರ್, ನಗರಸಭೆ ಆಯುಕ್ತ ಶ್ರೀಕಾಂತ್, ಸಿಬಿಐಟಿ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು