ಶನಿವಾರ, ಡಿಸೆಂಬರ್ 3, 2022
26 °C

ಗಡಿಯಲ್ಲಿ ವರ್ಷವಿಡೀ ಕನ್ನಡ ಡಿಂಡಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ಗಡಿ ಭಾಗವಾದ ಪಟ್ಟಣದಲ್ಲಿ ವರ್ಷವಿಡಿ ಕನ್ನಡ ಡಿಂಡಿಮ ಮೊಳಗಿಸುವ ಪೂರಕ ವಾತಾವರಣವಿದೆ ಎಂದು ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಕುವೆಂಪು ವೃತ್ತದಲ್ಲಿ ಕನ್ನಡ ಸಂಘದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನವೆಂಬರ್‌ನಲ್ಲಿ ಮಾತ್ರ ರಾಜ್ಯೋತ್ಸವ. ಆದರೆ, ಇಲ್ಲಿ ವರ್ಷವಿಡೀ ಕನ್ನಡ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ಕನ್ನಡ ಸಂಘ ನಿರಂತರವಾಗಿ ನೂರು ತಿಂಗಳು ಕಾರ್ಯಕ್ರಮ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದೆ. ಕನ್ನಡ ನಾಡು, ನುಡಿ ವಿಚಾರದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಯುವಜನರು ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸ್ಪಷ್ಟವಾಗಿ ಕನ್ನಡ ಮಾತನಾಡುವ ಮೂಲಕ ಮಕ್ಕಳಿಗೆ ಪ್ರೇರಣೆಯಾಗಬೇಕು. ಹಲವು ಭಾಷೆ ತಿಳಿದಿದ್ದರೂ ಮಾತನಾಡುವಾಗ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಕೆ. ಚಂದ್ರಾರೆಡ್ಡಿ ಮಾತನಾಡಿ, ನಾಡು, ಕಲೆ, ಸಾಹಿತ್ಯ, ಸಂಸ್ಕೃತಿ ಶ್ರೀಮಂತವಾಗಿದೆ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಕನ್ನಡ ಸಂಘ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ತಾಲ್ಲೂಕು ಮೂರು ರಾಜ್ಯಗಳ ಗಡಿಯಲ್ಲಿದೆ. ಎಕ್ಕಡ, ಎನ್ನಡ ಮಧ್ಯೆ ಕನ್ನಡ ಮೆಟ್ಟಿನಿಲ್ಲಬೇಕಾದ ಸ್ಥಿತಿಯಿದೆ. ಎಲ್ಲರೂ ಸೇರಿ ಸಡಗರದಿಂದ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಏಕತೆ, ಸಮಾನತೆ ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತವೇ ರಾಜ್ಯೋತ್ಸವ ಎಂದು ಬಣ್ಣಿಸಿದರು.

ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಗಳೂರಿನ ಹರೇಕಳ ಹಾಜಬ್ಬ ಹಾಗೂ ಕೆ. ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ವಿ. ಮಹೇಶ್, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಪುರಸಭೆ ಸದಸ್ಯ ಕಪಾಲಿ ಶಂಕರ್, ಹನುಮಪ್ಪ, ಬಿಇಒ ಡಿ.ಎನ್. ಸುಕನ್ಯ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.