ಬುಧವಾರ, ಮಾರ್ಚ್ 29, 2023
32 °C

ಕನ್ನಡ ಅನ್ನ ನೀಡುವ ಭಾಷೆ: ಜಿ.ಸುರೇಶ್‌ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರಿ ನೌಕರರು ಆಡಳಿತದಲ್ಲಿ ಕನ್ನಡವನ್ನೇ ಬಳಸುವ ಮೂಲಕ ನಾಡು, ನುಡಿ ರಕ್ಷಣೆಗೆ ಸಂಕಲ್ಪ ಮಾಡೋಣ. ನಮ್ಮ ಭಾಷೆ, ನಮ್ಮ ಹೆಮ್ಮೆ ಎಂಬುದನ್ನು ಸಾಬೀತುಪಡಿಸೋಣ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಹೇಳಿದರು.

ಇಲ್ಲಿ ಸೋಮವಾರ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕನ್ನಡ ಆಡಳಿತ ಭಾಷೆ ಎಂಬುದನ್ನು ಜಾರಿ ಮಾಡುವ ಹೊಣೆ ಹೊತ್ತ ನೌಕರರಿಗೆ ಸರ್ಕಾರದ ಆದೇಶಕ್ಕಿಂತ ಮುಖ್ಯವಾಗಿ ನಮ್ಮ ಮಾತೃ ಭಾಷೆಯೆಂಬ ಹಿರಿಮೆ ಇರಬೇಕು. ಕನ್ನಡ ಅನ್ನ ನೀಡುವ ಭಾಷೆ ಎಂಬುದನ್ನು ಸಾಕ್ಷೀಕರಿಸಬೇಕು’ ಎಂದರು.

‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಯುವ ಪೀಳಿಗೆಗೆ ಕನ್ನಡ ಕಲಿಸಿ ಭವಿಷ್ಯದಲ್ಲಿ ಬೆಳೆಸುವ ಕೆಲಸ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಮಕ್ಕಳಿಂದ ಮಾತ್ರ ಆಗುತ್ತಿದೆ. ಪ್ರತಿಯೊಬ್ಬರೂ ಕನ್ನಡ ಕಲಿತು ಬಳಸಿ ಬೆಳೆಸುತ್ತೇವೆಂಬ ಸಂಕಲ್ಪ ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸರ್ಕಾರಿ ಉದ್ಯೋಗದ ಭರವಸೆ ಕಲ್ಪಿಸಬೇಕು. ಆಗ ಮಾತ್ರ ಕನ್ನಡ ಕಲಿತದ್ದಕ್ಕೆ ಸಾರ್ಥಕತೆ ಲಭಿಸುತ್ತದೆ’ ಎಂದು ತಿಳಿಸಿದರು.

‘ಕಾನ್ವೆಂಟ್ ಸಂಸ್ಕೃತಿಯಲ್ಲಿ ನಾಶವಾಗುತ್ತಿರುವ ಕನ್ನಡ ಭಾಷೆಯನ್ನು ಸರ್ಕಾರಿ ಶಾಲೆಗಳು, ಸರ್ಕಾರಿ ನೌಕರರು ಉಳಿಸುತ್ತಿದ್ದಾರೆ. ಭವಿಷ್ಯದ ಕನ್ನಡ ಪ್ರಜೆಗಳು ಸರ್ಕಾರಿ ಶಾಲೆಗಳಲ್ಲಿ ಮಾತ್ರ ರೂಪುಗೊಳ್ಳುತ್ತಿದ್ದಾರೆ. ಇದಕ್ಕೆ ಕಾರಣಕರ್ತರಾದ ಕನ್ನಡ ಕಾಯಕದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಧನ್ಯವಾದ’ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ತಾಲ್ಲೂಕು ಗೌರವಾಧ್ಯಕ್ಷ ಆರ್.ನಾಗರಾಜ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು