ಕೋಲಾರ: ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದಲ್ಲಿಯೇ ಸ್ಪರ್ಧಿಸಲು ಅವಕಾಶ ನೀಡಬೇಕು‘ ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಭಾಷಣಕ್ಕೆ ಅಡ್ಡಿಪಡಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಏಪ್ರಿಲ್ 9ರಂದು ನಡೆಯಲಿರುವ ‘ಜೈ ಭಾರತ್’ ಸಮಾವೇಶ ಆಯೋಜನೆ ಸಂಬಂಧ ಶನಿವಾರ ನಗರದಲ್ಲಿ ಪೂರ್ವಭಾವಿ ಸಭೆಯಲ್ಲಿ ಇದೇ ಕಾರಣಕ್ಕೆ ಗೊಂದಲ ಉಂಟಾಯಿತು.
ಸುರ್ಜೇವಾಲಾ ಅವರು ಭಾಷಣ ಶುರು ಮಾಡುತ್ತಿದ್ದಂತೆ ವೇದಿಕೆ ಬಳಿಗೆ ಬಂದ ಕೆಲವರು ಕೈಮುಗಿದು ಬೇಡಿದರೆ, ಇನ್ನೂ ಕೆಲವರು ಕಾಲಿಗೆರಗಲು ಮುಂದಾದರು. ಇದರಿಂದ ಸುರ್ಜೇ ವಾಲಾ ತಬ್ಬಿಬ್ಬಾದರು. ‘ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ’ಎಂದು ಕೆಲವರು ಘೋಷಣೆ ಕೂಗಿದರು. ಸಿದ್ದರಾಮಯ್ಯ ಸುಮ್ಮನಿರಲು ಕಾರ್ಯಕರ್ತರಿಗೆ ಗದರಿದರು. ‘ಸುರ್ಜೇವಾಲಾ ಅವರಿಗೆ ಮಾತನಾಡಲು ಬಿಡಿ’ ಎಂದು ಜೋರು ಮಾಡಿದರು.
ಸಿದ್ದರಾಮಯ್ಯ ಅವರ ಭಾಷಣಕ್ಕೂ ಕಾರ್ಯಕರ್ತರು ಅಡ್ಡಿಪಡಿಸಿ ದರು. ಕೋಲಾರದಿಂದಲೇ ಸ್ಪರ್ಧೆ ಘೋಷಿ ಸುವಂತೆ ಪಟ್ಟು ಹಿಡಿದರು. ‘ಸಿದ್ದರಾಮಯ್ಯ ಮುಂದಿನ ಸಿ.ಎಂ’ ಎಂದು ಘೋಷಣೆ ಕೂಗಿದರು. ಗದರುತ್ತಲೇ ಭಾಷಣ ಮುಂದುವರಿಸಿದರು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಕೆ.ಆರ್.ರಮೇಶ್ ಕುಮಾರ್ ಇದ್ದರು. ಸಭೆಗೆ ಬರಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೈರಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.