ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನಿವೃತ್ತಿ: ಶಾಸಕ ಶ್ರೀನಿವಾಸಗೌಡ

Last Updated 18 ಮಾರ್ಚ್ 2023, 11:11 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರ ಪರ ಕೆಲಸ ಮಾಡುತ್ತೇನೆ. ಆಕಸ್ಮಾತ್‌ ಅವರು ಇಲ್ಲಿ ಕಣಕ್ಕಿಳಿಯದಿದ್ದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯಕ್ಕೆ ಮೊದಲನೇ ಮುಖ್ಯಮಂತ್ರಿ ನೀಡಿದ ಜಿಲ್ಲೆ ಕೋಲಾರ. ಮತ್ತೊಬ್ಬ ಮುಖ್ಯಮಂತ್ರಿಯನ್ನು ಇಲ್ಲಿಂದ ನೀಡಬೇಕೆಂಬುದು ನಮ್ಮ ಮಹಾದಾಸೆಯಾಗಿತ್ತು. ಆದರೆ, ಹೈಕಮಾಂಡ್‌ ಬೇಡವೆಂದರೆ ಅವರೇನು ಮಾಡುತ್ತಾರೆ?’ ಎಂದರು.

‘ಇಲ್ಲಿ ಸ್ಪರ್ಧಿಸಿದ್ದರೆ ಸಿದ್ದರಾಮಯ್ಯ ಖಂಡಿತ ಗೆಲ್ಲುತ್ತಿದ್ದರು. ಅವರು ಸ್ಪರ್ಧಿಸುತ್ತಾರೆ ಎಂಬ ವಿಶ್ವಾಸ ನನಗೆ ಇನ್ನೂ ಇದೆ. ನಾನು ಮಾತ್ರ ಸ್ಪರ್ಧೆ ಮಾಡುವುದಿಲ್ಲ’ ಎಂದು ಹೇಳಿದರು.

ಸಿದ್ದರಾಮಯ್ಯ ಕೋಲಾರ ಭೇಟಿ ಮುಂದೂಡಿಕೆ!
ಕೋಲಾರ:
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೋಲಾರ ಭೇಟಿ ದಿಢೀರನೇ ಮುಂದೂಡಲಾಗಿದೆ.

ಕೋಲಾರ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಮಾರ್ಚ್‌ 19ರಂದು, ನಗರ ಪ್ರದೇಶದಲ್ಲಿ ಮಾರ್ಚ್‌ 21ರಂದು ಪ್ರಚಾರ ಹಾಗೂ ಸಾರ್ವಜನಿಕ ಸಭೆ ನಡೆಸಲು ವೇಳಾಪಟ್ಟಿ ನಿಗದಿಯಾಗಿತ್ತು.

ಈ ಸಂಬಂಧ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯರಾದ ಎಂ.ಎಲ್‌.ಅನಿಲ್‌ ಕುಮಾರ್‌ ಹಾಗೂ ನಸೀರ್‌ ಅಹಮದ್‌ ಪೂರ್ವಭಾವಿ ಸಭೆ ನಡೆಸಿದ್ದರು.

‘ಸಿದ್ದರಾಮಯ್ಯ ಅವರ ಕೋಲಾರ ಪ್ರವಾಸ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT