ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬಿಸಿಲಿಗೆ ಬಸವಳಿದ ಜನ

Published 1 ಮೇ 2024, 13:34 IST
Last Updated 1 ಮೇ 2024, 13:34 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಕೆಲವು ಕಡೆಗಳಲ್ಲಿ ಬುಧವಾರ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್‌ ಮುಟ್ಟಿದ್ದು, ತಾಲ್ಲೂಕಿನ ಜನತೆ ಬಿಸಿಲು ಹಾಗೂ ಬಿಸಿಲಿನ ಗಾಳಿಗೆ ಬಸವಳಿದಿದ್ದಾರೆ.

ತಾಲ್ಲೂಕಿನಲ್ಲಿ ಇದುವರೆಗೂ ಬಿಸಿಲಿನ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿಯೇ ಇರಲಿಲ್ಲ. ಆದರೆ, ಈಚೆಗೆ ಸುಮಾರು ಒಂದು ತಿಂಗಳಿನಿಂದ 36 ಡಿಗ್ರಿ ಸೆಲ್ಸಿಯಸ್‌ನಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೂ ಇತ್ತು. ಬುಧವಾರ ಏಕಾಏಕಿ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದ್ದು, ಬಿಸಿ ಗಾಳಿಗೆ ಜನ ತತ್ತರಿಸಿದ್ದಾರೆ.

ಸಾಮಾನ್ಯವಾಗಿ ತಾಲ್ಲೂಕಿನ ರೈತರು ಎಂತಹ ಬಿಸಿಲಿದ್ದರೂ ತೋಟದಲ್ಲಿ ದುಡಿಯುತ್ತಲೇ ಇದ್ದರು. ಆದರೆ, ಬುಧವಾರ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮರಗಳ ಬಳಿ ಆಶ್ರಯ ಪಡೆದರು. 

ಬೆಳಿಗ್ಗೆ 10 ಗಂಟೆಗೆ 34 ಡಿಗ್ರಿ ಸೆಲ್ಸಿಯಸ್‌ನಿದ್ದ ಬಿಸಿಲು ಮಧ್ಯಾಹ್ನ 12ಕ್ಕೆ ಏಕಾಏಕಿ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಇದರಿಂದ ಜನ ತಣ್ಣೀರು, ತಂಪು ಪಾನೀಯಗಳು, ಎಳನೀರು, ಕಲ್ಲಂಗಡಿ, ಕಬ್ಬಿನ ರಸ, ಮಜ್ಜಿಗೆ ಮತ್ತಿತರರ ಮೊರೆ ಹೋಗಿದ್ದು ಕಂಡು ಬಂದಿತು.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸದೆ ರಸ್ತೆಯುದ್ದಕ್ಕೂ ಮರಗಳ ಕೆಳಗೆ ನಿಲ್ಲಿಸಿಕೊಂಡಿದ್ದರೆ, ಮತ್ತೆ ಕೆಲವರು ತಲೆಗಳ ಮೇಲೆ ಟವಲ್, ಟೋಪಿ ಹಾಗೂ ತಣ್ಣೀರಿನಲ್ಲಿ ಒದ್ದೆ ಮಾಡಿದ ಬಿಳಿ ಬಟ್ಟೆ ಹಾಕಿಕೊಂಡು ಸಾಗುತ್ತಿದ್ದರು.

ಇನ್ನು ಯುವಕರು ಹಾಗೂ ಬಾಲಕರು ಕೆರೆ ಹಾಗೂ ಬಾವಿಗಳಲ್ಲಿ ಈಜಾಡುತ್ತಿದ್ದರೆ, ಇನ್ನೂ ಕೆಲವರು ತಂಪು ಪಾನೀಯ ಅಂಗಡಿಗಳ ಮುಂದೆ ಜನ ಜಮಾಯಿಸಿದ್ದರು. ಕೆಲವರು ಬೀಸಣಿಕೆಯಲ್ಲಿ ಗಾಳಿ ಬೀಸಿಕೊಂಡರೆ, ಇನ್ನೂ ಕೆಲವರು ಮರಗಳ ಕೆಳಗೆ ಕುಳಿತು ವಿಶ್ರಾಂತಿ ಮಾಡುತ್ತಿದ್ದರು.

ತಾಲ್ಲೂಕಿನ ನಂಗಲಿ, ಹೆಬ್ಬಣಿ, ಕಾಂತರಾಜ ವೃತ್ತ, ಆವಣಿ, ಬೈರಕೂರು ಮತ್ತಿತರರ ಕಡೆಗಳಲ್ಲಿ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇನ್ನೂ ಐದು ದಿನ ಬಿಸಿಲು ಹೀಗೆ ಇರುತ್ತಿದೆ ಎಂಬ ಮಾಹಿತಿ ಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT