ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಸಂಬಳ್ಳಿ ಗ್ರಾ.ಪಂ ಚುನಾವಣೆ ಮುಂದಕ್ಕೆ

ಹೆಚ್ಚಿನ ಮತ ಪಡೆದ ಅಭ್ಯರ್ಥಿ, ಗುಂಪುಗಳ ಅಸಹನೆ, ಒತ್ತಡಕ್ಕೆ ಕುಸಿದು ಬಿದ್ದ ಚುನಾವಣಾಧಿಕಾರಿ
Last Updated 9 ಫೆಬ್ರುವರಿ 2021, 1:36 IST
ಅಕ್ಷರ ಗಾತ್ರ

ಕೆಜಿಎಫ್‌: ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆಯಬೇಕಿದ್ದ ಚುನಾವಣೆಯನ್ನು ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಮುಂದೂಡಲಾಯಿತು.

ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ 20 ಸದಸ್ಯರಿದ್ದರು. ಎರಡು ಗುಂಪುಗಳಾಗಿದ್ದ ಸದಸ್ಯರು ತಲಾ ಹತ್ತು ಮಂದಿ ಇದ್ದರು. ಕೊನೆ ಕ್ಷಣದಲ್ಲಿ ಯಾರ ಕೊರಳಿಗೆ ಜಯದ ಮಾಲೆ ಬೀಳುತ್ತದೆಯೋ ಎಂಬುದು ಕುತೂಹಲಕಾರಿಯಾಗಿತ್ತು. ಆದ್ದರಿಂದ ಅತ್ಯಂತ ಬಿಗಿ ವಾತಾವರಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಸುವಾಗ ಚುನಾವಣಾಧಿಕಾರಿ ದಿನೇಶ್‌ ಎರಡೂ ಸ್ಥಾನಕ್ಕೆ ಒಟ್ಟಿಗೆ ಚುನಾವಣೆ ನಡೆಸಿದರು. ಈ ಹಂತದಲ್ಲಿ ಉಂಟಾದ ಗೊಂದಲದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ 21 ಮತಗಳು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 19 ಮತಗಳು ಬಂದವು. ಅಧ್ಯಕ್ಷ ಸ್ಥಾನಕ್ಕೆ ಒಂದು ಹೆಚ್ಚುವರಿ ಮತ
ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದು ಕಡಿಮೆ ಮತ ಬಂದಿದ್ದು, ಗೊಂದಲಕ್ಕೆ ಗುರಿಯಾಯಿತು.

ಈ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಶ್ವಿನಿ 11 ಮತಗಳನ್ನು ಮತ್ತು 10 ಮತ ಪಡೆದ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಸರಸ್ವತಿ ಅವರನ್ನು ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಎಂದು ಘೋಷಿಸಬೇಕು ಎಂದು ಒಂದು ಗುಂಪು ಒತ್ತಾಯಿಸಿತು. ಇನ್ನೊಂದು ಗುಂಪು ಚುನಾವಣೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿತು. ಈ ಹಂತದಲ್ಲಿ ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ವೈ.ಸಂಪಂಗಿ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಪಂಚಾಯಿತಿ ಕಚೇರಿಗೆ ಬಂದು ತಮ್ಮ ವಾದವನ್ನು ಮಂಡಿಸತೊಡಗಿದರು. ಎಂ.ನಾರಾಯಣಸ್ವಾಮಿ ಮತ್ತು ವಿಜಯರಾಘವರೆಡ್ಡಿ ಬಹುಮತ ಗಳಿಸಿದವರನ್ನು ವಿಜಯೀ ಎಂದು ಘೋಷಿಸಬೇಕು ಎಂದು ಒತ್ತಾಯ ತಂದರು. ಒತ್ತಡಕ್ಕೆ ಸಿಲುಕಿದ ಚುನಾವಣಾಧಿಕಾರಿ ದಿನೇಶ್‌ ಅಸ್ವಸ್ಥರಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚುನಾವಣೆ ಪ್ರಕ್ರಿಯೆಯನ್ನು ಮುಂದುವರೆಸಿದರು. ಕೊನೆಗೆ ತಾಂತ್ರಿಕ ತೊಂದರೆ ನೆಪವೊಡ್ಡಿ ಚುನಾವಣೆಯನ್ನು ಮುಂದೂಡಲಾಯಿತು.

ಈ ಮಧ್ಯೆ ಪಂಚಾಯತಿ ಕಚೇರಿಯಲ್ಲಿ ಗೊಂದಲ ಹೆಚ್ಚುತ್ತಿದ್ದಂತೆಯೇ, ಹೊರಗಡೆ ಸೇರಿದ್ದ ಅವರ ಬೆಂಬಲಿಗರು ಕೂಡ ಅಸಹನೆಯನ್ನು ಕಳೆದುಕೊಳ್ಳತೊಡಗಿದರು. ಚುನಾವಣೆ ಕೇಂದ್ರಕ್ಕೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ ಹೋಗಿದ್ದನ್ನು ಪ್ರಶ್ನಿಸಿದ ಮಾಜಿ ಶಾಸಕ ವೈ.ಸಂಪಂಗಿ ಪರವಾದ ಗುಂಪು ಘೋಷಣೆಗಳನ್ನು ಕೂಗಿತು. ನಂತರ ಪೊಲೀಸರು ಅವರನ್ನು ಸಮಾಧಾನಪಡಿಸಿ, ಚದುರಿಸಿದರು.

ಉಳಿದಂತೆ ಮಾರಿಕುಪ್ಪ, ಘಟ್ಟಮಾದಮಂಗಲ, ಸುಂದರಪಾಳ್ಯ ಮತ್ತು ಹುಲ್ಕೂರು ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಿತು. ಈ ಪೈಕಿ ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ ನಡೆಯಿತು.

ಹರೀಶ್ ಕೃಷ್ಣ ಅಧ್ಯಕ್ಷ: ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿಗೆ ಹರೀಶ್‌ ಕೃಷ್ಣ ಅಧ್ಯಕ್ಷರಾಗಿ, ರೋಜಾ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಜಲಜಾಕ್ಷಿ ಅಧ್ಯಕ್ಷೆ: ಮಾರಿಕುಪ್ಪ ಗ್ರಾಮ ಪಂಚಾಯಿತಿ ಗೆ ಜಲಜಾಕ್ಷಿ ಮತ್ತು ರಘುಕುಮಾರ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದರು. ಅವರು ತಮ್ಮ ಪ್ರತಿಸ್ಪರ್ಧಿಗಳಾದ ಚೈತ್ರ ಮತ್ತು ನಾದಿಯ ಅವರನ್ನು ಎರಡು ಮತಗಳಿಂದ ಪರಾಜಿತಗೊಳಿಸಿದರು.

ರಾಮಬಾಬು ಅಧ್ಯಕ್ಷೆ: ಸುಂದರಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಮಬಾಬು ತಮ್ಮ ಪ್ರತಿಸ್ಪರ್ಧಿ ರಾಧಾಕೃಷ್ಣ ಅವರನ್ನು 10–8 ಮತಗಳಿಂದ ಸೋಲಿಸಿದರು. ಅದೇ ರೀತಿ ರತ್ನಮ್ಮ ಅವರು ಸರಸ್ವತಮ್ಮ ಅವರನ್ನು ಸೋಲಿಸಿ ಉಪಾಧ್ಯಕ್ಷೆಯಾದರು.

ವೆಂಕಟಮ್ಮ ಅಧ್ಯಕ್ಷೆ: ಹುಲ್ಕೂರು ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ವೆಂಕಟಮ್ಮ 9 ಮತಗಳನ್ನು ಪಡೆದು, 7 ಮತ ಪಡೆದ ಸುಧಾರಾಣಿ ಅವರನ್ನು ಸೋಲಿಸಿ ಅಧ್ಯಕ್ಷೆಯಾದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ಸೋಮಶೇಖರರೆಡ್ಡಿ 10 ಮತಗಳನ್ನು ಪಡೆದರು. ಎದುರಾಳಿ ವೆಂಕಟಾಚಲಪತಿ 6 ಮತ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT