ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ ಯಾರೋ ಒಬ್ಬರ ಪರಿಶ್ರಮವಲ್ಲ: ಕೇಂದ್ರ ಮಾಜಿ ಸಚಿವ ಮುನಿಯಪ್ಪ

ಶಾಸಕ ರಮೇಶ್‌ಕುಮಾರ್‌ ವಿರುದ್ಧ ಮುನಿಯಪ್ಪ ಪರೋಕ್ಷ ವಾಗ್ದಾಳಿ
Last Updated 19 ಸೆಪ್ಟೆಂಬರ್ 2020, 15:15 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಹಾಗೂ ಹಲವು ಜನಪ್ರತಿನಿಧಿಗಳ ಸಹಕಾರದಿಂದ ಕೆ.ಸಿ ವ್ಯಾಲಿ ಯೋಜನೆ ಯಶಸ್ವಿಯಾಗಿದೆ. ಆದರೆ, ಇದನ್ನೆಲ್ಲಾ ಮರೆತು ಒಬ್ಬರ ಪರಿಶ್ರಮದಿಂದಲೇ ಯೋಜನೆ ಕಾರ್ಯಗತವಾಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಪರೋಕ್ಷವಾಗಿ ಶಾಸಕ ರಮೇಶ್‌ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಎಸ್.ಅಗ್ರಹಾರ ಕೆರೆಗೆ ಶನಿವಾರ ಕಾಂಗ್ರೆಸ್‌ ಕಿಸಾನ್‌ ಖೇತ್‌ ಘಟಕದಿಂದ ಬಾಗಿನ ಅರ್ಪಿಸಿ ಮಾತನಾಡಿ, ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಒಂದೆಡೆ ಎತ್ತಿನಹೊಳೆ ಯೋಜನೆ ಕೂಗು ಬಲವಾಗಿತ್ತು. ಮತ್ತೊಂದೆಡೆ ಶಾಶ್ವತ ನೀರಾವರಿ ಹೋರಾಟ ಪ್ರಬಲವಾಗಿತ್ತು. ಈ ಕಾರಣಕ್ಕೆ ಶಾಶ್ವತ ನೀರಾವರಿ ಯೋಜನೆಗಾಗಿ ಏನಾದರೂ ಮಾಡಲೇಬೇಕೆಂಬ ಹಟ ನಮ್ಮಲ್ಲಿ ಮೂಡಿತು’ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನ ಕೊಳಚೆ ನೀರನ್ನು ಕೆರೆಗಳಿಗೆ ಹರಿಸುವಂತೆ ಮನವಿ ಮಾಡಿದೆವು. ಆಗ ಸಿದ್ದರಾಮಯ್ಯ ಅವರು ಕೊಳಚೆ ನೀರು ತೆಗೆದುಕೊಂಡು ಹೋಗಿ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ಹೊರ ದೇಶಗಳಲ್ಲಿ ಕೊಳಚೆ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಬಳಸಲಾಗುತ್ತಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟು ಯೋಜನೆ ಜಾರಿಗೆ ಒತ್ತಡ ಹೇರಿದೆವು’ ಎಂದು ವಿವರಿಸಿದರು.

‘ಯೋಜನೆ ಸಂಬಂಧ ನಡೆದ 3 ಸಭೆಗಳಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸಹಕಾರ ನೀಡಿದ್ದರಿಂದ ಯೋಜನೆ ಪೂರ್ಣಗೊಂಡು ನೀರು ಬರಲು ಸಾಧ್ಯವಾಯಿತು. ಈ ಸತ್ಯ ಮರೆಮಾಚಿ ಒಬ್ಬರಿಂದಲೇ ಯೋಜನೆ ಜಾರಿಯಾಯಿತು ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ’ ಎಂದು ತಿಳಿಸಿದರು.

ಡಿ.ಕೆ.ರವಿ ಶ್ರಮ: ‘ಜಿಲ್ಲೆಗೆ ಕೊಳಚೆ ನೀರು ಹರಿಸುವ ವಿಚಾರ ಬಹಿರಂಗಪಡಿಸಿರಲಿಲ್ಲ. ವಿಚಾರ ಹೊರಗೆ ಬಂದರೆ ವಿರೋಧ ವ್ಯಕ್ತವಾಗಬಹುದೆಂಬ ಕಾರಣಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಯವರು ಯೋಜನೆಗೆ ಒಪ್ಪಿದ ಬಳಿಕವಷ್ಟೇ ಸಿದ್ದರಾಮಯ್ಯ ಬಳಿ ಹೋಗಿ ವಿಚಾರ ತಿಳಿಸಿದ್ದೆವು. ಡಿ.ಕೆ.ರವಿ ವಾರದಲ್ಲಿ ಮೂರ್ನಾಲ್ಕು ದಿನ ಯೋಜನೆ ಬಗ್ಗೆಯೇ ಚರ್ಚಿಸುತ್ತಿದ್ದರು. ಅವರು ಈಗ ಇಲ್ಲದಿದ್ದರೂ ಅವರ ಶ್ರಮ ಯೋಜನೆಯಲ್ಲಿ ಶಾಶ್ವತವಾಗಿದೆ’ ಎಂದು ಸ್ಮರಿಸಿದರು.

‘ಯಾವುದೇ ಸಾಧನೆಗೆ ಸಹಭಾಗಿತ್ವ ಅಗತ್ಯ. ಒಬ್ಬರಿಂದ ಏನೂ ಮಾಡಲು ಸಾಧ್ಯವಿಲ್ಲ. ಯೋಜನೆ ವ್ಯಾಪ್ತಿಯ 4 ಸಾವಿರ ಕರೆಗಳು ತುಂಬುವವರೆಗೂ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಹೋರಾಟ ಮಾಡಿದರೆ ಮಾತ್ರ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದು ಸಲಹೆ ನೀಡಿದರು.

ಮಾಜಿ ಸಚಿವ ನಿಸಾರ್ ಅಹಮ್ಮದ್‌, ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಮುರಳಿಗೌಡ, ಮುಖಂಡರಾದ ಮಂಜುನಾಥ್, ಯಲ್ಲಪ್ಪ, ರಾಮಲಿಂಗರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT