ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ ನೀರು ದುರ್ಬಳಕೆ: ಕಾನೂನು ಕ್ರಮ

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಖಡಕ್‌ ಎಚ್ಚರಿಕೆ
Last Updated 19 ಮೇ 2020, 15:24 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಹಲವೆಡೆ ಕೆ.ಸಿ ವ್ಯಾಲಿ ಯೋಜನೆ ನೀರು ದುರ್ಬಳಕೆಯಾಗುತ್ತಿದ್ದು, ನೀರಿನ ಸೋರಿಕೆ ತಡೆಗಟ್ಟಿ ಜಿಲ್ಲೆಯ ಕೆರೆಗಳನ್ನು ತುಂಬಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಕೆ.ಸಿ ವ್ಯಾಲಿ ಯೋಜನೆ ಸಂಬಂಧ ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕೆ.ಸಿ ವ್ಯಾಲಿ ನೀರಿನ ಸೋರಿಕೆ ತಡೆಯುವ ಸಂಬಂಧ ಸಣ್ಣ ನೀರಾವರಿ ಇಲಾಖೆ ಹಾಗೂ ಬೆಸ್ಕಾಂ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ನೀರು ಕಳವು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಕೆ.ಸಿ ವ್ಯಾಲಿ ನೀರಿನ ಕಾಲುವೆಯ ಅಕ್ಕಪಕ್ಕ 100 ಮೀಟರ್ ವ್ಯಾಪ್ತಿಯಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸುವುದನ್ನು ನಿಷೇಧಿಸಲಾಗಿದೆ. ಯೋಜನೆ ವ್ಯಾಪ್ತಿಯ ಕಾಲುವೆಯಲ್ಲಿರುವ ಚೆಕ್‌ಡ್ಯಾಂಗಳ ಎತ್ತರ ಹೆಚ್ಚಿರುವುದರಿಂದ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದೆ. ಹೀಗಾಗಿ ಈ ಚೆಕ್‌ಡ್ಯಾಂಗಳ ಎತ್ತರ ತಗ್ಗಿಸಿ ವಾಲ್‌ ಅಳವಡಿಸಬೇಕು’ ಎಂದು ಸೂಚಿಸಿದರು.

‘ಚೆಕ್‌ಡ್ಯಾಂಗಳಲ್ಲಿ 2 ಅಡಿ ಮಾತ್ರ ನೀರು ಸಂಗ್ರಹಣೆ ಮಾಡಿ ಉಳಿದ ನೀರನ್ನು ಮುಂದಕ್ಕೆ ಹರಿಸಬೇಕು. ಸದ್ಯ ಕೆ.ಸಿ ವ್ಯಾಲಿ ಯೋಜನೆಯಲ್ಲಿ ಜಿಲ್ಲೆಗೆ 260 ಎಂಎಲ್‌ಡಿ ನೀರು ಬರುತ್ತಿದ್ದು, ಸೆಪ್ಟೆಂಬರ್ ವೇಳೆಗೆ 400 ಎಂಎಲ್‌ಡಿ ನೀರು ಹರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಕಟ್ಟೆಚ್ಚರ ವಹಿಸಿ: ‘ಪಕ್ಕದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿದೆ. ಆ ರಾಜ್ಯಗಳಿಂದ ಜಿಲ್ಲೆಗೂ ಸೋಂಕು ಹರಡಿದೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದ ಕಾರಣ ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಬೇಕು’ ಎಂದು ಸೂಚಿಸಿದರು.

‘ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಸೋಂಕಿತರನ್ನು ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದ ಸಂಗತಿ ನನ್ನ ಗಮನಕ್ಕೆ ಬಂದಿರಲಿಲ್ಲ. ಜಿಲ್ಲಾಧಿಕಾರಿ ಈ ವಿಷಯ ಹೇಳಿದ ಮೇಲೆ ಗೊತ್ತಾಯಿತು. ಎಸ್‍ಎನ್‌ಆರ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಸೌಕರ್ಯವಿದೆ ಮತ್ತು ವೈದ್ಯಕೀಯ ಸಿಬ್ಬಂದಿ ಸಹ ಸಮರ್ಥರಿದ್ದಾರೆ’ ಎಂದರು.

ಲಾಕ್‌ಡೌನ್‌ ಸಡಿಲಿಕೆ: ‘ಜಿಲ್ಲೆಯಲ್ಲಿ ಈಗಾಗಲೇ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದೆ. ಆದರೆ, ಭಾನುವಾರ ಮಾತ್ರ ಲಾಕ್‌ಡೌನ್‌ ಸಂಪೂರ್ಣ ಜಾರಿಯಲ್ಲಿರುತ್ತದೆ. ಭಾನುವಾರ ಮದ್ಯದಂಗಡಿಗಳನನ್ನು ಬಂದ್ ಮಾಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ವಿವರಿಸಿದರು.

ಶಾಸಕ ಕೆ.ಆರ್‌.ರಮೇಶ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿ.ಪಂ ಸಿಇಒ ಎಚ್‌.ವಿ.ದರ್ಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT