ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಬಿಜೆಪಿಯಲ್ಲಿ ಶಮನವಾಗದ ಬಿಕ್ಕಟ್ಟು

Published 10 ಏಪ್ರಿಲ್ 2024, 14:24 IST
Last Updated 10 ಏಪ್ರಿಲ್ 2024, 14:24 IST
ಅಕ್ಷರ ಗಾತ್ರ

ಕೆಜಿಎಫ್‌: ಬಿಜೆಪಿಯಲ್ಲಿ ಉಂಟಾಗಿರುವ ಒಡಕು ಇನ್ನೂ ಶಮನವಾಗದೆ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಒಗ್ಗಟ್ಟಿನ ಪ್ರಚಾರ ಸಾಧ್ಯವಾಗದೆ ಇರುವುದು ಜೆಡಿಎಸ್‌ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.

ಈಗಾಗಲೇ ತಾಲ್ಲೂಕು ಬಿಜೆಪಿಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಬಣ, ಮೋಹನಕೃಷ್ಣ ಬಣ ಮತ್ತು ಸಂಸದ ಮುನಿಸ್ವಾಮಿ ಬಣ ಎಂಬ ಮೂರು ಗುಂಪುಗಳು ಇವೆ. ಇವರ ನಡುವೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿರುವುದರಿಂದ ಬಿಜೆಪಿಯಿಂದ ಎಲ್ಲಾ ಪಕ್ಷದ ಮುಖಂಡರು ಸಾರ್ವಜನಿಕವಾಗಿ ಪ್ರಚಾರಕ್ಕೆ ಇಳಿಯಲು ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದ ಮೋಹನಕೃಷ್ಣ ಅವರು ಈಚೆಗೆ ತಮ್ಮ ಬೆಂಬಲಿಗರ ಸಭೆ ಕರೆದು, ಯಾರಿಗೆ ಬೆಂಬಲ ಸೂಚಿಸಬೇಕು ಎಂದು ಎರಡು ದಿನಗಳಲ್ಲಿ ನಿರ್ಧರಿಸುವುದಾಗಿ ತಿಳಿಸಿದ್ದರು. ಆದರೆ, ಅವರು ಇದುವರೆವಿಗೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಅವರ ಬೆಂಬಲವನ್ನು ಕಾಂಗ್ರೆಸ್ ಪಕ್ಷ ಕೂಡ ಕೋರಿದೆ. ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಆಸಕ್ತಿ ವಹಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬು ಕೂಡ ಮೋಹನಕೃಷ್ಣ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಬಿಜೆಪಿಯ ಪ್ರಮುಖ ಮುಖಂಡರಾದ ಜಯಪ್ರಕಾಶ್ ನಾಯ್ಡು, ನವೀನ್‌ ರಾಮ, ನಗರ ಘಟಕದ ಮಾಜಿ ಅಧ್ಯಕ್ಷ ಕಮಲನಾಥನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೇಮಾರೆಡ್ಡಿ ಮತ್ತಿತರರು ಇದುವರೆವಿಗೂ ಪ್ರಚಾರ ಕಣಕ್ಕೆ ಇಳಿದಿಲ್ಲ. ‍ಪಾರಾಂಡಹಳ್ಳಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೂಡ ಇವರು ಯಾರೂ ಭಾಗವಹಿಸಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರುಗಳೇ ಪರಸ್ಪರ ಬಿಜೆಪಿ ನಾಯಕರ ವಿರುದ್ಧ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ಈ ಮಧ್ಯೆ ಏ. 12 ರಂದು ಗಾಲಿ ಜನಾರ್ಧನ ರೆಡ್ಡಿ ಅವರು ತಾಲ್ಲೂಕಿಗೆ ಎನ್‌ಡಿಎ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬರಲಿದ್ದಾರೆ. ಮಾಜಿ ಶಾಸಕ ವೈ.ಸಂಪಂಗಿ ವಿರೋಧಿ ಬಣದ ಬಿಜೆಪಿ ಮುಖಂಡರು ಕ್ಯಾಸಂಬಳ್ಳಿಯಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿದ್ದಾರೆ. ಸಭೆಯನ್ನು ಯಶಸ್ವಿ ಮಾಡಲು ಈಗಾಗಲೇ ಮುಖಂಡರು ತಯಾರಿ ನಡೆಸಿದ್ದಾರೆ. ಆದರೆ, ತಾಲ್ಲೂಕು ಅಧ್ಯಕ್ಷ ಲಕ್ಷ್ಮಿ ನಾರಾಯಣಶರ್ಮ ಅವರು ಕ್ಯಾಸಂಬಳ್ಳಿ ಕಾರ್ಯಕ್ರಮದ ಬಗ್ಗೆ ತಮಗೇನೂ ತಿಳಿದಿಲ್ಲ. ಬೇತಮಂಗಲದ ಕಲ್ಯಾಣ ಮಂಟಪದಲ್ಲಿ ನಡೆಯುವ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ಬಾಬು ಗೆಲ್ಲಬೇಕೆಂಬುದು ನಮ್ಮೆಲ್ಲರ ಧ್ಯೇಯ. ನಮ್ಮಲ್ಲಿ ಇದ್ದ ಗುಂಪುಗಾರಿಕೆಯನ್ನು ಬಿಟ್ಟು ಎಲ್ಲರೂ ಒಂದಾಗಿದ್ದೇವೆ. ಬಿಜೆಪಿ ಕಾರ್ಯಕರ್ತರು ಕೂಡ ಬೆಂಬಲ ನೀಡಲು ಮುಂದಾಗಿದ್ದಾರೆ. ಬಿಜೆಪಿಯ ಎಲ್ಲಾ ಗುಂಪುಗಳ ಜತೆ ಮಾತನಾಡಿದ್ದೇವೆ. ಸಮನ್ವಯ ಸಾಧಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂಬುದು ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಸುರೇಶ್‌ ಕುಮಾರ್ ಮಾತಾಗಿದೆ.

ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರು ಯಾವುದೇ ಸಭೆಗೆ ಕರೆದರೂ ಹೋಗುತ್ತೇವೆ. ಎಲ್ಲರ ಬೆಂಬಲವನ್ನೂ ಕೇಳುತ್ತಿದ್ದೇವೆ. ನಮ್ಮ ಹೈಕಮಾಂಡ್‌ ನಿರ್ದೇಶನದಂತೆ ನಡೆಯುತ್ತಿದ್ದೇವೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದಯಾನಂದ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT