ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆ: ಕೊತ್ತೂರು ಪ್ರತಿಕೃತಿ ದಹಿಸಿ ಪ್ರತಿಭಟನೆ

Last Updated 1 ಏಪ್ರಿಲ್ 2022, 14:40 IST
ಅಕ್ಷರ ಗಾತ್ರ

ಕೋಲಾರ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಗಾಂಧಿವನದಿಂದ ಮೆಕ್ಕೆ ವೃತ್ತದವರೆಗೆ ಕೊತ್ತೂರು ಮಂಜುನಾಥ್‌ರ ಅಣಕು ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಕೊತ್ತೂರು ಮಂಜುನಾಥ್ ಅಕ್ರಮವಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಚುನಾವಣೆಯಲ್ಲಿ ಗೆದ್ದು ದಲಿತರ ಮೀಸಲಾತಿ ಕಬಳಿಸಿದ್ದರು. ಈ ವಿಚಾರವಾಗಿ ಹೈಕೋರ್ಟ್‌ ಅವರಿಗೆ ಛೀಮಾರಿ ಹಾಕಿದೆ. ಆದರೂ ಬುದ್ಧಿ ಕಲಿಯದ ಅವರು ದಲಿತ ನಾಯಕ ಮುನಿಯಪ್ಪರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ’ ಎಂದು ಕಾಂಗ್ರೆಸ್‌ ಕಿಸಾನ್‌ ಖೇತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌ ಕಿಡಿಕಾರಿದರು.

‘ದಲಿತರಿಗೆ ಸಿಗಬೇಕಿದ್ದ ಸಂವಿಧಾನಾತ್ಮಕ ಮೀಸಲಾತಿ ಹಕ್ಕು ಕಸಿದುಕೊಂಡ ಮಂಜುನಾಥ್‌ ಅವರು ದಲಿತ ವಿರೋಧಿ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಈಗ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಬರಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡು’ ಎಂದು ಟೀಕಿಸಿದರು.

ಹೋರಾಟದ ಎಚ್ಚರಿಕೆ: ‘ಮುನಿಯಪ್ಪರ ರಾಜಕೀಯ ಅನುಭವಕ್ಕೆ ಮಂಜುನಾಥ್‌ ಸರಿ ಸಾಟಿಯಲ್ಲ. ನಿನ್ನೆ ಮೊನ್ನೆ ರಾಜಕೀಯ ಪ್ರವೇಶಿಸಿ ಅಡ್ಡದಾರಿ ಮೂಲಕ ಶಾಸಕರಾದ ಅವರಿಗೆ ಮಾತಿನ ಮೇಲೆ ಹಿಡಿತವಿಲ್ಲ. ಮುನಿಯಪ್ಪರ ವಿರುದ್ಧ ಹಗರುವಾಗಿ ಮಾತನಾಡಿದರೆ ಜಿಲ್ಲೆಯ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಮಂಜುನಾಥ್‌ ತಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಕಾಂಗ್ರೆಸ್‌ ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟಪತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್‌ಶಂಕರ್, ಮುಖಂಡರಾದ ಶಿವಕುಮಾರ್, ಮುನೀಂದ್ರ, ರಾಜೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT