ಶನಿವಾರ, ಸೆಪ್ಟೆಂಬರ್ 18, 2021
21 °C

ಗಗನ ಮುಖಿಯಾದ ಜಂಬು ನೇರಳೆ ಬೆಲೆ

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಸುಗ್ಗಿಯೊಂದಿಗೆ ಜಂಬು ನೇರಳೆ ಹಣ್ಣಿನ ಸುಗ್ಗಿ ಪ್ರಾರಂಭವಾಗಿದೆ. ಬೆಳೆಗಾರಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಸಿಗುತ್ತಿದೆ.

ತಾಲ್ಲೂಕಿನ ರಸ್ತೆ ಬದಿಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆ ದೊಡ್ಡ ಸಂಖ್ಯೆಯಲ್ಲಿ ಜಂಬು ನೇರಳೆ ಮರಗಳನ್ನು ಬೆಳೆಸಿದೆ. ಅದರ ಜತೆಗೆ ಕೃಷಿಕರು ತಮ್ಮ ಜಮೀನಿನ ಕಟವೆಗಳಲ್ಲಿ ಈ ಮರಗಳನ್ನು ಬೆಳೆಸಿದ್ದಾರೆ. ಕೆಲವರು ಜಂಬು ನೇರಳೆ ಮರಗಳನ್ನೇ ಪ್ರತ್ಯೇಕವಾಗಿ ಬೆಳೆಸಿದ್ದಾರೆ. ಹಿಂದೆ ಈ ಹಣ್ಣು ಉಚಿತವಾಗಿ ಸಿಗುತ್ತಿತ್ತು. ಬೇಕೆಂದವರು ಮರ ಹತ್ತಿ ಬಿಡಿಸಿಕೊಂಡು ತಿನ್ನಬಹುದಾಗಿತ್ತು.

ತಾಲ್ಲೂಕಿನ ರಸ್ತೆ ಬದಿಗಳಲ್ಲಿ ಬೃಹತ್‌ ಗಾತ್ರದ ನೇರಳೆ ಮರಗಳಿದ್ದವು. ಹಣ್ಣಿನ ಗಾತ್ರ ಚಿಕ್ಕದಾಗಿದ್ದ ಕಾರಣ ಅದನ್ನು ಸ್ಥಳೀಯವಾಗಿ ನಾಯಿ ನೇರಳೆ ಎಂದು ಕರೆಯುತ್ತಿದ್ದರು. ಆದರೆ ಆ ಮರಗಳು ನಾನಾ ಕಾರಣಗಳಿಂದ ಧರೆಗುರುಳಿದವು. ಈಗ ಅವುಗಳ ಸ್ಥಾನದಲ್ಲಿ ಸುಧಾರಿತ ತಳಿಯಾದ ಜಂಬು ನೇರಳೆ ಮರಗಳನ್ನು ಬೆಳೆಸಲಾಗಿದೆ. ಶಾಲಾ ಹುಡುಗರು ಶಾಲೆ ಬಿಟ್ಟ ಕೂಡಲೇ ನೇರಳೆ ಮರ ಏರುವುದು ಸಾಮಾನ್ಯವಾಗಿದೆ. ವಾಲು ಕೊಂಬೆಗಳಿಗೆ ಹೋಗಿ ಆಕಸ್ಮಿಕವಾಗಿ ಕೆಳಗೆ ಬಿದ್ದು, ಕೈ–ಕಾಲು ಮುರಿದುಕೊಳ್ಳುವ ಮಕ್ಕಳಿಗೂ ಕೊರತೆ ಇಲ್ಲ.

ಬದಲಾದ ಪರಿಸ್ಥಿತಿಯಲ್ಲಿ ಜಂಬು ನೇರಳೆ ಆರ್ಥಿಕ ಮಹತ್ವ ಪಡೆದುಕೊಂಡಿದೆ. ಕೆ.ಜಿ ಒಂದಕ್ಕೆ ₹ 200 ರಿಂದ 225ರವರೆಗೆ ಮಾರಾಟವಾಗುತ್ತಿದೆ. ನೇರಳೆ ಹಣ್ಣು ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳಿಂದ ಫಸಲು ಖರೀದಿಸಿ, ಹಗಲು ರಾತ್ರಿ ಕಾವಲಿದ್ದು, ಉದ್ದನೆಯ ಬಿದಿರು ಗಳದ ಸಮಾಯದಿಂದ ಮರ ಹತ್ತಿ ಹಣ್ಣು ಬಿಡಿಸಿ ಮಾರುಕಟ್ಟೆಗೆ ಕೊಂಡೊಯ್ದು ಮಾರುತ್ತಾರೆ. ದೊಡ್ಡ ಗಾತ್ರದ ಒಂದು ಮರದ ಫಸಲು ₹ 60 ರಿಂದ 80 ಸಾವಿರದ ವರೆಗೆ ಮಾರಾಟವಾಗಿರುವ ನಿದರ್ಶನವಿದೆ. ಹಾಗಾಗಿ ಕೆಲವು ರೈತರು ಮಾವು ಹಾಗೂ ಹುಣಸೆಗೆ ಪರ್ಯಾಯವಾಗಿ ಜಂಬು ನೇರಳೆ ಗಿಡ ನೆಟ್ಟು ಬೆಳೆಸುತ್ತಿದ್ದಾರೆ.

‘ಜಂಬು ನೇರಳೆ ಬೇಸಾಯ ಸುಲಭ. ಮಳೆಗಾಲದಲ್ಲಿ ಗಿಡ ನೆಟ್ಟು, ಜಾನುವಾರು ಬಾಯಿ ಹಾಕದಂತೆ ನೋಡಿಕೊಂಡರೆ ಎರಡು ಮೂರು ವರ್ಷದಲ್ಲಿ ಬೆಳೆದು ನಿಲ್ಲುತ್ತದೆ. ಗಿಡವಾಗಿರುವಾಗಲೇ ಕಾಯಿ ಬಿಡಲು ಪ್ರಾರಂಭಿಸಿ, ವರ್ಷದಿಂದ ವರ್ಷಕ್ಕೆ ಫಸಲು ಹೆಚ್ಚುತ್ತಾ ಹೋಗುತ್ತದೆ. ಹುಳು ಬಾಧೆಗೆ ಒಂದೆರಡು ಸಲ ಔಷಧಿ ಸಿಂಪರಣೆ ಮಾಡಿದರೆ ಸಾಕು ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ’ ಎಂದು ಕಡಪಲರೆಡ್ಡಿಗಾರಿಪಲ್ಲಿ ಗ್ರಾಮದ ಕೃಷಿಕ ಬೈರಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಂಬು ನೇರಳೆ ಹಣ್ಣನ್ನು ಇಷ್ಟಪಡದವರು ಅಪರೂಪ. ಹಣ್ಣನ್ನು ನೋಡುತ್ತಿದಂತೆ ಬಾಯಿಯಲ್ಲಿ ನೀರೂರುತ್ತದೆ. ನೇರಳೆ ಜ್ಯೂಸ್‌ ತಯಾರಿಕೆಯಲ್ಲೂ ಈ ಹಣ್ಣನ್ನು ಬಳಸಲಾಗುತ್ತದೆ. ಉತ್ತಮ ದರ್ಜೆಯ ಹಣ್ಣು ತಿನ್ನಲು ಹೋದರೆ, ಗುಣಮಟ್ಟದಲ್ಲಿ ಚೂರು ಕಡಿಮೆ ಇದ್ದರೂ ಅದನ್ನು ಜ್ಯೂಸ್ ತಯಾರಿಕೆಗೆ ಕಳಿಸಿಕೊಡಗಾಗುತ್ತದೆ. ತಾಲ್ಲೂಕಿನಲ್ಲಿ ಬೆಳೆಯುವ ಜಂಬು ನೇರಳೆ ಹಣ್ಣನ್ನು ಸಂಗ್ರಹಿಸಿ, ಬುಟ್ಟಿಗಳಿಗೆ ತುಂಬಿ ಬಸ್‌ ಹಾಗೂ ಟೆಂಪೋ ಮೂಲಕ ನೆರೆಯ ಆಂಧ್ರಪ್ರದೇಶದ ಮಾರುಕಟ್ಟೆಗಳಿಗೆ ರವಾನಿಸಲಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಕೊರತೆಯಿಂದಾಗಿ ಮರಗಳಲ್ಲಿ ಕಡಿಮೆ ಫಸಲು ಕಾಣಿಸಿಕೊಂಡಿದೆ. ಇದು ಮಾರುಕಟ್ಟೆಗೆ ಬರುವ ಆವಕ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ. ‘ಹಣ್ಣಿಗೆ ಬೇಡಿಕೆ ಇರುವುದರಿಂದ ಬೆಲೆ ಏರಿಕೆ ಕಂಡಿದೆ’ ಎಂದು ನೇರಳೆ ಹಣ್ಣಿನ ವ್ಯಾಪಾರಿ ನವಾಜ್‌ ಸಾಬ್‌ ಅಭಿಪ್ರಾಯಪಟ್ಟರು.

ಮಳೆ ಕೊರತೆ ಎಲ್ಲ ಬೆಳೆಗಳ ಮೇಲೂ ದುಷ್ಪರಿಣಾಮ ಬೀರಿದೆ. ಸಮಯಕ್ಕೆ ಬಾರದ ಮಳೆ ಮಾವಿನ ಕಾಯಿ ಬೆಳೆಯಲು ಅವಕಾಶ ನೀಡಲಿಲ್ಲ. ಹಾಗೆಯೇ ಈಗ ಜಂಬು ನೇರಳೆ ಫಸಲು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಆದ್ದರಿಂದಲೇ ಹಣ್ಣಿನ ಬೆಲೆ ಗಗನ ಮುಖಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು