ಕೋಲಾರ: ವರ್ಷದಿಂದ ಖಾಲಿ ಬಿದ್ದಿರುವ ಕೋಲಾರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿದ್ದು, ಬಿ.ಎಂ.ಮುಬಾರಕ್ ಅವರು ಅಧ್ಯಕ್ಷ ಸ್ಥಾನಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವುದು ಕಾಂಗ್ರೆಸ್ ಪಾಳಯದಲ್ಲಿ ಭಯದ ವಾತಾವರಣ ನಿರ್ಮಿಸಿದೆ.
ಮಾಜಿ ಅಧ್ಯಕ್ಷರೂ ಆಗಿರುವ ಮುಬಾರಕ್ ಆರನೇ ವಾರ್ಡ್‌ನಿಂದ (ಧರ್ಮರಾಯನಗರ ಮತ್ತು ಬೈರೇಗೌಡ ನಗರ) ಗೆದ್ದು ಸದಸ್ಯರಾಗಿರುವುದು ಕಾಂಗ್ರೆಸ್‌ನಿಂದಲೇ. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. ನಂತರ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದಾಗಿ ಅವರೇ ಹೇಳಿಕೊಂಡಿದ್ದರು.
ಈಗ ಮುಬಾರಕ್ ಕಾಂಗ್ರೆಸ್‌ನಿಂದ ಅವಕಾಶ ಕೋರಿದ್ದಾರೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಮುಖಂಡರು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ನಡುವೆ ಮುಬಾರಕ್, ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಗಿಟ್ಟಿಸಲು ಭಾರಿ ಪ್ರಯತ್ನ ನಡೆಸಿದ್ದಾರೆ.
ಇತ್ತ ಕಾಂಗ್ರೆಸ್‌ನಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಸೂಚಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಈಗಾಗಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹಲವು ಸದಸ್ಯರು ಪೈಪೋಟಿ ನಡೆಸಿದ್ದು, ಲಾಬಿ ಆರಂಭಿಸಿದ್ದಾರೆ. ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮೇಲೂ ಒತ್ತಡ ಹೇರುತ್ತಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ 23ನೇ ವಾರ್ಡ್‌ನ ಅಜ್ರ ನಸ್ರೀನ್ (ಕೆ.ಜಿ.ಮೊಹಲ್ಲಾ), 27ನೇ ವಾರ್ಡ್‌ನ ಕೆ.ಲಕ್ಷ್ಮಿದೇವಮ್ಮ (ಕಾರಂಜಿಕಟ್ಟೆ), 4ನೇ ವಾರ್ಡ್‌ನ ಪ್ರಸಾದ್ ಬಾಬು (ಕುರುಬರಪೇಟೆ) ಹಾಗೂ 31ನೇ ವಾರ್ಡ್‌ನ ಸೈಯದ್ ಅಫ್ಸರ್ (ರಹಮತ್ ನಗರ–1) ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಅವರಲ್ಲದೇ, ಪಕ್ಷೇತರ ಸದಸ್ಯ 11ನೇ ವಾರ್ಡ್‌ನ ವಿ.ಮಂಜುನಾಥ್, ಕಾಂಗ್ರೆಸ್‌ನಿಂದ ಗೆದ್ದಿದ್ದ 8ನೇ ವಾರ್ಡ್‌ನ ಪಾವನಾ ಕೆ.ಎಸ್. ಕೂಡ ಸ್ಪರ್ಧೆಯಲ್ಲಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಗಳಾದ 15ನೇ ವಾರ್ಡ್‌ನ ಸಂಗೀತಾ ಜಗದೀಶ್, 5ನೇ ವಾರ್ಡ್‌ನ ಅಪೂರ್ವ ಎನ್., 26ನೇ ವಾರ್ಡ್‌ನ ಎಸ್.ಎಂ.ಭಾಗ್ಯಮ್ಮ (ಕಾಂಗ್ರೆಸ್) ಆಕಾಂಕ್ಷಿಗಳಾಗಿದ್ದಾರೆ.
ಇತ್ತ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ರಹಸ್ಯ ತಂತ್ರಗಾರಿಕೆ ನಡೆಸಿದ್ದಾರೆ. ಈಗಾಗಲೇ ಮೈತ್ರಿ ಆಗಿರುವ ಈ ಪಕ್ಷಗಳು ಇಲ್ಲೂ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿವೆ. ಕಳೆದ ಬಾರಿ ಅಧ್ಯಕ್ಷರಾಗಿದ್ದ ಶ್ವೇತಾ ಶಬರೀಶ್ ಅವರನ್ನೇ ಮತ್ತೆ ಕಣಕ್ಕಿಳಿಸುವ ಬಗ್ಗೆಯೂ ಜೆಡಿಎಸ್‌ನಲ್ಲಿ ಚರ್ಚೆ ನಡೆದಿದೆ.
ಈ ಬಾರಿ ಕೋಲಾರ ನಗರಸಭೆ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ–ಎ (ಬಿಸಿಎ) ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳೆಗೆ ಮೀಸಲಿಡಲು ನಿಗದಿಪಡಿಸಲಾಗಿದೆ.
ಎರಡನೇ ಅವಧಿಗೆ ಮೀಸಲಾತಿ ನಿಗದಿಪಡಿಸದ ಕಾರಣ ವರ್ಷದಿಂದ (2023ರ ಜೂನ್ 1ರಿಂದ) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳು ಖಾಲಿ ಇದ್ದವು.
ಕೋಲಾರ ನಗರಸಭೆಗೆ ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಕೋಲಾರ ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು ಕಾಂಗ್ರೆಸ್ ಬಳಿ ಹೆಚ್ಚು ಸದಸ್ಯರಿದ್ದಾರೆ. ಮೇಲ್ನೋಟಕ್ಕೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ. ಕಾಂಗ್ರೆಸ್‌ನ 12 ಸದಸ್ಯರು ಜೆಡಿಎಸ್‌ನ 8 ಸದಸ್ಯರು. ಬಿಜೆಪಿಯ 3 ಸದಸ್ಯರು ಎಸ್‌ಡಿಪಿಐನ 4 ಸದಸ್ಯರು ಹಾಗೂ 8 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಆದರೆ ಈಚೆಗೆ ಕೆಲ ಸದಸ್ಯರು ಪಕ್ಷ ಬದಲಾಯಿಸಿದ್ದು ಸಂಖ್ಯೆಯಲ್ಲಿ ವ್ಯತ್ಯಾಸವಾಗಲಿದೆ. ನಗರಸಭೆಯ 35 ಮಂದಿ ಚುನಾಯಿತ ಸದಸ್ಯರು ಸಂಸದ ಎಂ.ಮಲ್ಲೇಶ್ ಬಾಬು (ಜೆಡಿಎಸ್) ಶಾಸಕ ಕೊತ್ತೂರು ಮಂಜುನಾಥ್ (ಕಾಂಗ್ರೆಸ್) ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ (ಕಾಂಗ್ರೆಸ್) ಹಾಗೂ ಇಂಚರ ಗೋವಿಂದರಾಜು (ಜೆಡಿಎಸ್) ಸೇರಿದಂತೆ ಒಟ್ಟು 39 ಮಂದಿಗೆ ಮತದಾನದ ಹಕ್ಕಿದೆ. ಅಧಿಕಾರದ ಗದ್ದುಗೆ ಏರಲು 20 ಸದಸ್ಯರ ಬೆಂಬಲ ಬೇಕಿದೆ. ಯಾವ ಪಕ್ಷದವರು ಯಾರಿಗೆ ಮತದಾನ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಪ್ರಮುಖವಾಗಿ ಪಕ್ಷೇತರರು ಪ್ರಮುಖ ಪಾತ್ರ ವಹಿಸಲಿದ್ದಾರೆ.
ಜೆಡಿಎಸ್‌ನಲ್ಲಿ ಶ್ವೇತಾ ಶಬರೀಶ್ ಹಾಗೂ ಬಿಜೆಪಿಯ ಮೂವರು ಆಕಾಂಕ್ಷಿಗಳು ಇದ್ದಾರೆ. ಮೈತ್ರಿ ಮಾಡಿಕೊಂಡೇ ನಾವು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇವೆ. ಬಿ.ಎಂ.ಮುಬಾರಕ್ ವಿಚಾರ ನಮಗೆ ಗೊತ್ತಿಲ್ಲ. ನಮ್ಮ ಪಕ್ಷದ ಕೆಲ ಸದಸ್ಯರನ್ನು ಅವರು ಭೇಟಿ ಮಾಡಿರಬಹುದು. ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಅಂಕಿಸಂಖ್ಯೆ ನೋಡಿಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಸಿಎಂಆರ್ ಶ್ರೀನಾಥ್ ಜೆಡಿಎಸ್ ಮುಖಂಡ ಕೋಲಾರ
ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಕೋಲಾರ ನಗರಸಭೆ ಕಾರ್ಯಾಲಯದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಮಯಾವಕಾಶ ಇರುತ್ತದೆ. ನಂತರ ನಾಮಪತ್ರ ಪರಿಶೀಲನೆ ನಡೆಯಲಿದ್ದು ಉಮೇದುವಾರಿಕೆ ವಾಪಸ್ ಪಡೆಯಲು ಅವಕಾಶ ನೀಡಲಾಗುತ್ತದೆ. ಆ ನಂತರ ಮತ ಎಣಿಕೆ ಶುರುವಾಗಲಿದೆ. 2 ಗಂಟೆ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಡಾ.ಮೈತ್ರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಅವಕಾಶ ಕೋರಿದ್ದೇನೆ. ಅವಕಾಶ ಮಾಡಿಕೊಡಲಿ ಇಲ್ಲದಿರಲಿ ನನ್ನ ಸ್ಪರ್ಧೆ ಖಚಿತ. ಜೆಡಿಎಸ್ ಸೇರಿದಂತೆ ಎಲ್ಲಾ ಸದಸ್ಯರ ಬೆಂಬಲ ಸಿಗುವ ವಿಶ್ವಾಸವಿದೆ.-ಬಿ.ಎಂ.ಮುಬಾರಕ್, ನಗರಸಭೆ ಸದಸ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ಒಳ್ಳೆಯ ಹಾಗೂ ಗೌರವಯುತ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಿ ಗೆಲ್ಲಿಸಿಕೊಡುವುದು ನಮ್ಮ ಕರ್ತವ್ಯ. ಆ ವ್ಯಕ್ತಿಯ ಮೇಲೆ ಯಾವುದೇ ಕಪ್ಪು ಚುಕ್ಕೆ ಇರಬಾರದು.-ಮುರಳಿಗೌಡ, ನಗರಸಭೆ ಸದಸ್ಯ ಕಾಂಗ್ರೆಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.