ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಕಾಂಗ್ರೆಸ್ ಟಿಕೆಟ್: ಇಬ್ಬರ ಕಿತ್ತಾಟದಲ್ಲಿ 3ನೆಯವರಿಗೆ ಲಾಭ?

Published 23 ಮಾರ್ಚ್ 2024, 6:14 IST
Last Updated 23 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ಕೋಲಾರ: 2019ರಲ್ಲಿ ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಪ್ರಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಲ್‌.ಹನುಮಂತಯ್ಯ ಅವರ ಹೆಸರು ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದರೆ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣದವರು ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಅಭ್ಯರ್ಥಿ ಹೆಸರನ್ನು ಮುಂದಿಟ್ಟುಕೊಂಡು ಲಾಬಿ ಮುಂದುವರಿಸಿದ್ದಾರೆ.

ಈ ಎರಡೂ ಬಣಗಳ ಮುಖಂಡರನ್ನು ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತೊಡಗಿದ್ದಾರೆ. ಆದರೆ, ಅದಕ್ಕೆ ಮಣಿಯದ ಉಭಯ ಬಣಗಳು ತಮ್ಮ ತಮ್ಮ ವಾದ ಮುಂದಿಡುತ್ತಿವೆ.

ಇಬ್ಬರ ಕಿತ್ತಾಟದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಬಣಗಳ ಜಗಳ ಈಗ ಉಭಯರಿಗೆ ಕುತ್ತು ತರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಯಾರಿಗೆ ಟಿಕೆಟ್‌ ಕೊಟ್ಟರೂ ಮತ್ತೊಂದು ಬಣದ ಅಸಮಾಧಾನಕ್ಕೆ ಕಾರಣವಾಗಲಿದೆ. ಹೀಗಾಗಿ, ಹನುಮಂತಯ್ಯ ಹೆಸರು ಈಗ ಪ್ರಬಲವಾಗಿ ಕೇಳಿಬರುತ್ತಿದೆ.

ಈಗಾಗಲೇ ಚಿತ್ರದುರ್ಗ ಕ್ಷೇತ್ರಕ್ಕೆ ಎಡಗೈ ಸಮುದಾಯದ ಬಿ.ಎನ್‌.ಚಂದ್ರಪ್ಪ ಅವರ ಹೆಸರನ್ನು ಘೋಷಿಸಲಾಗಿದೆ. ಕೋಲಾರಕ್ಕೂ ಇದೇ ಸಮುದಾಯದವರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಹನುಮಂತಯ್ಯ ಹಾಗೂ ಚಿಕ್ಕಪೆದ್ದಣ್ಣ ಇಬ್ಬರೂ ಎಡಗೈ ಸಮುದಾಯದವರು.

ಇದೆಲ್ಲದರ ನಡುವೆ ಕ್ಷೇತ್ರಕ್ಕೆ ಒಂದು ಹೆಸರನ್ನು ಅಂತಿಮಗೊಳಿಸಿ ರಾಜ್ಯದಿಂದ ಪಟ್ಟಿ ಕಳುಹಿಸಲಾಗಿದ್ದು, ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ಸೇರಿ ಅಭ್ಯರ್ಥಿಯನ್ನು ಒಂದೆರಡು ದಿನಗಳಲ್ಲಿ ಘೋಷಿಸುವ ನಿರೀಕ್ಷೆ ಇದೆ.

ರಾಜಸಭೆ ಸದಸ್ಯರೂ ಆಗಿರುವ ಹನುಮಂತಯ್ಯ ಅವರ ಸದಸ್ಯತ್ವದ ಏಪ್ರಿಲ್‌ 2ಕ್ಕೆ ಕೊನೆಗೊಳ್ಳಲಿದೆ. ವಿಧಾನಸಭೆಯಿಂದ ರಾಜ್ಯಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಮರು ಆಯ್ಕೆಗೆ ಅವಕಾಶ ನೀಡಿರಲಿಲ್ಲ. ಈ ಸಂಬಂಧ ಮಾದಿಗ ಸಮುದಾಯದ ಆಕ್ಷೇಪವೂ ವ್ಯಕ್ತವಾಗಿತ್ತು, ಈ ಹಿನ್ನೆಲೆಯಲ್ಲಿ ಕೋಲಾರ ಮೀಸಲು ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ ಎಂಬುದು ಗೊತ್ತಾಗಿದೆ.

ಹನುಮಂತಯ್ಯ 2019ರ ಆಗಸ್ಟ್‌ನಲ್ಲಿ ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ ರಾಜ್ಯ ಮಟ್ಟದ ಮೊದಲ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈಗ ಅವರನ್ನು ಇದೇ ಕ್ಷೇತ್ರಕ್ಕೆ ಎಳೆದು ತರುವ ಸಾಧ್ಯತೆ ಇದೆ.

ಅವರು ದೊಡ್ಡಬಳ್ಳಾಪುರದ ರಾಮೇಶ್ವರ ಗ್ರಾಮದವರಾಗಿದ್ದು, ಈಗ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೆಲೆಸಿದ್ದಾರೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದ ಅವರು ಸ್ವಯಂ ನಿವೃತ್ತಿ ತೆಗೆದುಕೊಂಡರು. 2001ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ನಾಮನಿರ್ದೇಶನಗೊಂಡರು. 2015ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡರು. 2018ರಲ್ಲಿ ರಾಜ್ಯಸಭೆ ಸದಸ್ಯರಾದರು.

ಹಲವಾರು ಕವನ, ಸಂಶೋಧನಾ ಪ್ರಬಂಧ ಬರೆದಿದ್ದು, ಕೃತಿಗಳನ್ನು ಸಂಪಾದಿಸಿದ್ದಾರೆ. ಅವರಿಗೆ ಹಲವಾರು ಪ್ರಶಸ್ತಿಗಳೂ ಲಭಿಸಿವೆ.

ಟಿಕೆಟ್‌ ಘೋಷಣೆಗೆ ಇನ್ನೂ ಒಂದೆರಡು ದಿನಗಳು ಹಿಡಿಯುವುದರಿಂದ ಅಷ್ಟರಲ್ಲಿ ಯಾರ ಲಾಬಿ ಜೋರಾಗಿ ಯಾರಿಗೆ ಟಿಕೆಟ್‌ ಅದೃಷ್ಟ ಒಲಿಯಲಿದೆ ಎಂಬ ಕುತೂಹಲವೂ ಕ್ಷೇತ್ರದ ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಇದೆ.

ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಸಿಗುವ ವಿಶ್ವಾಸ ನನಗಿದೆ. ಕೋಲಾರದ ಸ್ಥಳೀಯ ಮುಖಂಡರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇನೆ. ಕ್ಷೇತ್ರದ ಒಡನಾಟವೂ ನನಗಿದೆ
ಎಲ್‌.ಹನುಮಂತಯ್ಯ ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT