ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ‌ಪ್ರೊ.ಬಾಲಕೃಷ್ಣ

ಮುಂದಿನ ತಿಂಗಳು ಮುಳಬಾಗಿಲಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Last Updated 13 ಜನವರಿ 2023, 6:15 IST
ಅಕ್ಷರ ಗಾತ್ರ

ಕೋಲಾರ: ಮುಳಬಾಗಿಲಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಜೆ. ಬಾಲಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಲೇಖಕ, ಅನುವಾದಕರು ಹಾಗೂ ವ್ಯಂಗ್ಯ ಚಿತ್ರಕಾರರೂ ಆಗಿರುವ ಬಾಲಕೃಷ್ಣ ಮುಳಬಾಗಿಲು ತಾಲ್ಲೂಕಿನ ಮಂಡಿಕಲ್ಲು ಗ್ರಾಮದವರು.

‘ಬಾಲಕೃಷ್ಣ ಅವರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎನ್.ಬಿ. ಗೋಪಾಲಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲಕೃಷ್ಣ ಕೃಷಿ ವಿಜ್ಞಾನದಲ್ಲಿ ಸ್ನಾತಕ ಪದವಿ, ಕೃಷಿ ಸೂಕ್ಷ್ಮಜೀವಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕನ್ನಡದ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ
ಪಡೆದಿದ್ದಾರೆ.

ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ, ಚರಿತ್ರೆ, ಕಲೆ, ಸೂಫಿ, ಝೆನ್ ತತ್ವದರ್ಶನದವರೆಗೆ ತಿರುಗಾಡಿ ಅಂತಿಮವಾಗಿ ಅವರ ಮನಸ್ಸು ನೆಲೆಗೊಳ್ಳುವುದು ಜೀವಕಾರುಣ್ಯದಲ್ಲೇ.

ಪ್ರಮುಖ ಕೃತಿಗಳು: ವ್ಯಂಗ್ಯಚಿತ್ರ–ಚರಿತ್ರೆ, ಕನಸೆಂಬ ಮಾಯಾಲೋಕ, ಮಿಥುನ–ಲೈಂಗಿಕ ಮನೋವಿಜ್ಞಾನದ ಬರಹಗಳು, ಮಾತಾಹರಿ, ಮಳೆಬಿಲ್ಲ ನೆರಳು–ವಿಜ್ಞಾನ ಲೇಖನ, ನೆನಪುಗಳಿಗೇಕೆ ಸಾವಿಲ್ಲ? (ಕಥಾ ಸಂಕಲನ), ಕೃಷಿ ವಿಜ್ಞಾನ ಸಾಹಿತ್ಯ ನಡೆದುಬಂದ ಹಾದಿ, ಮೌನ ವಸಂತ (ಮಹಿಳಾ ಕಥನಗಳು), ನಡೆದಷ್ಟು ದೂರ (ಪ್ರವಾಸ ಕಥನ).

ಮಳೆಬಿಲ್ಲ ನೆರಳು ಕೃತಿಗೆ 2012ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅತ್ಯುತ್ತಮ ವಿಜ್ಞಾನ ಪುಸ್ತಕ ಪ್ರಶಸ್ತಿ ಲಭಿಸಿದೆ.

ಅನುವಾದಿತ ಪ್ರಮುಖ ಕೃತಿಗಳು: ನೀನೆಂಬ ನಾನು- ಸೂಫಿ ಎಂಬ ಮಾನಸಿಕ ಅವಸ್ಥೆ ಮತ್ತು ಸೂಫಿ ಕತೆಗಳು, ಬೊಕಾಷಿಯೋನ ರಸಿಕತೆಗಳು, ಮಾಂಟೋ ಕಥೆಗಳು, ಪುಟ್ಟ ರಾಜಕುಮಾರ, ನಮ್ಮ ನಿಮ್ಮೊಳಗೊಬ್ಬ ನಸ್ರುದ್ದೀನ್.

ಬಾಲಕೃಷ್ಣ ರಚಿತ ವ್ಯಂಗ್ಯಚಿತ್ರಗಳು ‘ಪ್ರಜಾವಾಣಿ’, ‘ಸುಧಾ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2008ರಿಂದಲೂ ತಮ್ಮ ‘ಅಂತರಗಂಗೆ’ ಬ್ಲಾಗ್‌ನಲ್ಲಿ ನಿರಂತರವಾಗಿ ಬರಹ ಹಾಗೂ ವ್ಯಂಗ್ಯಚಿತ್ರ ಪ್ರಕಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT