ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆ ತ್ರಿಭಾಷಾ ಸಂಗಮ: ಸಂಸದ ಮುನಿಸ್ವಾಮಿ

ಕನ್ನಡ ಭವನದ ಸೌಕರ್ಯ ಲೋಕಾರ್ಪಣೆ
Last Updated 2 ಜುಲೈ 2021, 14:46 IST
ಅಕ್ಷರ ಗಾತ್ರ

ಕೋಲಾರ: ‘ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುವವರಿದ್ದಾರೆ. ಜಿಲ್ಲೆಯು ತ್ರಿಭಾಷಾ ಸಂಗಮವಾಗಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ಸುವರ್ಣ ಕನ್ನಡ ಭವನದಲ್ಲಿನ ಆಸನ ವ್ಯವಸ್ಥೆ, ಧ್ವನಿವರ್ಧಕ ಹಾಗೂ ವಿದ್ಯುದೀಕರಣ ಸೌಕರ್ಯ ಲೋಕಾರ್ಪಣೆ ಮಾಡಿ ಮಾತನಾಡಿ, ‘ಜಿಲ್ಲೆಯಲ್ಲಿ ಭಾಷಾ ಸಾಮರಸ್ಯವಿದೆ. ಭಾಷೆ ವಿಚಾರದಲ್ಲಿ ಬೇಧ ಭಾವವಿಲ್ಲ. ಎಲ್ಲಾ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಗಡಿ ಜಿಲ್ಲೆಯ ಕೋಲಾರ ಸುತ್ತಲೂ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಾಗಗಳಿಂದ ಕೂಡಿದೆ. ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಸಲು ಹೆಚ್ಚು ಕಾರ್ಯಕ್ರಮ ಆಯೋಜಿಸಬೇಕು. ನಾಡು, ನುಡಿ ಮತ್ತು ಸಂಸ್ಕೃತಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ಕನ್ನಡಿಗರು ಸಹಬಾಳ್ವೆಯಿಂದ ಬದುಕು ಕಟ್ಟಿಕೊಳ್ಳಬೇಕು. ಶಾಂತಿ, ಸಹನೆ, ತಾಳ್ಮೆ, ಸಹೋದರತೆ ಜತೆಗೆ ಬದುಕಬೇಕು. ದೇಶದ ಇತರೆ ಭಾಷೆಗಳಂತೆ ಕನ್ನಡ ಭಾಷೆಯು ಭವ್ಯ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಹೊಂದಿದೆ. ಜನರ ಆಡು ಭಾಷೆ ಯಾವುದೇ ಆಗಿರಲಿ, ಕನ್ನಡ ಕಲಿಕೆ ಕಡ್ಡಾಯವಾಗಬೇಕು’ ಎಂದು ಆಶಿಸಿದರು.

‘ಕನ್ನಡ ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಗೆ ಭವನ ಸಹಕಾರಿಯಾಗಲಿದೆ. ಭವನದಲ್ಲಿನ ಉಳಿಕೆ ಕಾಮಗಾರಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿ ಪೂರ್ಣಗೊಳಿಸಲಾಗುತ್ತದೆ ಮುಂದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡ ಭವನ ಹಸ್ತಾಂತರಿಸಲಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯ ಜನ ಕನ್ನಡವನ್ನು ಅಭಿಮಾನದಿಂದ ಉಳಿಸಿ ಬೆಳೆಸುತ್ತಿದ್ದಾರೆ. ಕನ್ನಡ ಅನ್ನ ನೀಡುವ ಭಾಷೆ. ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಭಾರತದವರು ತಮ್ಮ ಮಾತೃ ಭಾಷೆ ಪ್ರೀತಿಸುತ್ತಾರೆ. ಅದೇ ರೀತಿ ಕನ್ನಡಿಗರು ಮಾತೃ ಭಾಷೆ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು. ಕನ್ನಡ ಭವನವನ್ನು ನಾಡು ನುಡಿಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು. ಕಟ್ಟಡವನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

‘ಸುವರ್ಣ ಕನ್ನಡ ಭವನದ ಕಾಮಗಾರಿ 5 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಸುಂದರ ಮತ್ತು ಸುಸಜ್ಜಿತ ಭವನ ನಿರ್ಮಾಣಗೊಂಡಿದೆ. ಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ವಿಧಾನ ಪರಿಷತ್ ಶಾಸಕ ಗೋವಿಂದರಾಜು ಮನವಿ ಮಾಡಿದರು.

ಶಾಸಕರ ಅನುದಾನ: ‘ಸುವರ್ಣ ಕನ್ನಡ ಭವನದ 2010ರಲ್ಲಿ ಕಾಮಗಾರಿ ಆರಂಭವಾಯಿತು. ನಂತರ 2017ರಲ್ಲಿ ಭವನ ಉದ್ಘಾಟನೆಯಾಯಿತು. ಆದರೆ, ಒಳಾಂಗಣದಲ್ಲಿ ಆಸನಗಳ ವ್ಯವಸ್ಥೆ, ಧ್ವನಿವರ್ಧಕ, ವಿದ್ಯುತ್‌ ದೀಪ ಅಳವಡಿಕೆ ಕೆಲಸ ಬಾಕಿ ಇದ್ದವು’ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಎಸ್.ನಾರಾಯಣಗೌಡ ವಿವರಿಸಿದರು.

‘ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಅವರು ತಮ್ಮ ಅನುದಾನದಲ್ಲಿ ತಲಾ ₹ 10 ಲಕ್ಷ ನೀಡಿದ್ದು, ಆ ಹಣ ಬಳಸಿಕೊಂಡು ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. 250 ಆಸನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷೆ ಶ್ವೇತಾ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT