ಕೋಲಾರ: ‘ನಮ್ಮ ಪಕ್ಷದವರು ಅಥವಾ ವಿರೋಧ ಪಕ್ಷದವರು ಸೇರಿದಂತೆ ವೈಯಕ್ತಿವಾಗಿ ಯಾರು ಏನೇ ಹೇಳಿಕೆ ನೀಡಿದರೂ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವ ತನಕ ನಿಲ್ಲಿಸುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಕೊಡಲೂ ಯೋಗ್ಯತೆ ಇಲ್ಲ, ಕೊಡುವವರನ್ನು ಕಂಡು ಸಹಿಸಿಕೊಳ್ಳಲೂ ಆಗುವುದಿಲ್ಲ. ವಿರೋಧ ಪಕ್ಷದವರಿಗೆ ತಾಕತ್ತಿದ್ದರೆ ಐದು ಗ್ಯಾರಂಟಿ ರದ್ದು ಮಾಡಿ ಎಂದು ಹೇಳಲಿ ನೋಡೋಣ’ ಎಂದು ಸವಾಲು ಹಾಕಿದರು.
‘ಸರ್ಕಾರದ ಬಳಿ ಹಣ ಇಲ್ಲವೆಂದು ಹೇಳಿದ್ದು ಯಾರು? ಕೋಲಾರ ಜಿಲ್ಲೆಗೆ ₹2 ಸಾವಿರ ಕೋಟಿಗೂ ಅಧಿಕ ಅನುದಾನ ಬಂದಿದೆ. ಲೋಕೋಪಯೋಗಿ ಇಲಾಖೆಯಿಂದ ₹50 ಕೋಟಿ ಈಗಾಗಲೇ ಬಂದಿದೆ. ಕೋಲಾರ ನಗರವೊಂದಕ್ಕೇ ₹60 ಕೋಟಿ ಬಂದಿದೆ. ಹಲವು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ನನ್ನ ಇಲಾಖೆಯಿಂದಲೇ ಹಣ ನೀಡಲಾಗಿದೆ. ಮಾಲೂರಿನಲ್ಲಿ ಬಸ್ ನಿಲ್ದಾಣ ನಿರ್ಮಾಣ, ಕೆರೆ ಅಭಿವೃದ್ಧಿ ಕೈಗೊಳ್ಳಲಾಗಿದೆ’ ಎಂದರು.
ನಗರಸಭೆಯಲ್ಲಿ ಅಕ್ರಮ ಖಾತೆ ವಿತರಣೆ ಕುರಿತು ಪ್ರತಿಕ್ರಿಯಿಸಿ, ‘ಭ್ರಷ್ಟಾಚಾರ ನಡೆದರೆ ಸಹಿಸುವುದಿಲ್ಲ. ಅಕ್ರಮ ಖಾತೆ ವಿತರಣೆ ಕುರಿತು ತನಿಖೆ ನಡೆಸಿ ಯಾರೇ ತಪ್ಪು ಮಾಡಿದ್ದರು ಅವರಿಗೆ ಶಿಕ್ಷೆ ವಿಧಿಸುವ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಇಲಾಖೆಯ ಆಯುಕ್ತರಿಗೂ ನಿರ್ದೇಶನ ನೀಡಲಾಗುವುದು’ ಎಂದು ಹೇಳಿದರು.
‘ಟೊಮೆಟೊ ಹಾಗೂ ಸಸಿ ಮಾರಾಟ ಮಾಡುವ ನರ್ಸರಿಗಳು ಯಾವುದೇ ಇಲಾಖೆಯ ವ್ಯಾಪ್ತಿಯಲ್ಲಿಲ್ಲ. ಕಳಪೆ ಬಿತ್ತನೆ ಬೀಜ ಸಸಿಗಳನ್ನು ಹಾಕಿ ರೈತರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಕೃಷಿ, ತೋಟಗಾರಿ ಇಲಾಖೆಯ ಅಧಿಕಾರಿಗಳಿಗೂ ಇದು ತಲೆ ನೋವಾಗಿದ್ದು, ನರ್ಸರಿಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ಜಾರಿ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದ್ದು, ಅದು ಅತಿಶ್ರೀದಲ್ಲೇ ಅನುಷ್ಠಾನಕ್ಕೆ ಬರಲಿದೆ’ ಎಂದು ತಿಳಿಸಿದರು.
‘ಟೊಮೆಟೊ ಸೇರಿದಂತೆ ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಕುಂಠಿತವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಕಂಡು ಹಿಡಿಯಲು ತಂಡ ರಚಿಸಲಾಗಿದ್ದು, ವರದಿ ಬಂದ ಕೂಡಲೇ ಸರ್ಕಾರದಿಂದ ರೈತರಿಗೆ ತರಬೇತಿ ಕೊಡಿಸುವ ಕೆಲಸ ಮಾಡಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಜಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.