ಶನಿವಾರ, ಜನವರಿ 23, 2021
27 °C
ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಬ್ದುಲ್ ಅಜೀಮ್ ಮೆಚ್ಚುಗೆ

ಕೋಲಾರ ಬುದ್ಧಿವಂತರ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋಲಾರ ಜಿಲ್ಲೆಯು ಬುದ್ಧಿವಂತರಿಂದ ಕೂಡಿದ ಜಿಲ್ಲೆ. ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಜಿಲ್ಲೆಗೆ ಉತ್ತಮ ಭವಿಷ್ಯವಿದೆ’ ಎಂದು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಬ್ದುಲ್ ಅಜೀಮ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿಗಳ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯು ಕೆರೆ ಮತ್ತು ಬೆಟ್ಟಗಳಿಂದ ಕೂಡಿದ್ದು, ಬೆಟ್ಟಗಳ ಮೇಲೆ ಬಿದ್ದ ಮಳೆ ನೀರು ಕೆರೆಗಳಿಗೆ ಹರಿದು ಹೋಗಲು ಸೂಕ್ತ ಅವಕಾಶವಿಲ್ಲ. ಆದ್ದರಿಂದ ಬೆಟ್ಟಗಳ ಸುತ್ತ ಕಾಲುವೆ ಮಾಡಿ ನೀರು ಸರಾಗವಾಗಿ ಕೆರೆಗಳಿಗೆ ಹರಿಯುವಂತೆ ಮಾಡಬೇಕು. ಇದರಿಂದ ಕೆರೆಗಳು ಬೇಗ ಭರ್ತಿಯಾಗುತ್ತವೆ’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ನೀರಿನ ಅಭಾವ ಉಂಟಾದರೆ ಸಮುದ್ರದ ನೀರನ್ನು ಸಂಸ್ಕರಿಸಿ ಬಳಸಬೇಕಾಗುತ್ತದೆ. ಜಿಲ್ಲೆಯು ಸಮುದ್ರಕ್ಕೆ 250 ಕಿ.ಮೀ ದೂರದಲ್ಲಿದ್ದು, ಕೆ.ಸಿ ವ್ಯಾಲಿ ಯೋಜನೆಯ ಸಂಸ್ಕರಿಸಿದ ನೀರು ಮೊದಲು ಕೋಲಾರ ಜಿಲ್ಲೆಗೆ ದೊರೆಯುತ್ತಿದೆ. ಇದರಿಂದ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಸರ್ಕಾರವು ಯೋಜನೆಗಳಲ್ಲಿ ಶೇ 15ರಷ್ಟು ಅನುದಾನವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿದೆ. ಯೋಜನೆಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದೆ’ ಎಂದು ಹೇಳಿದರು.

‘ಸಾರ್ವಜನಿಕ ಕುಂದು ಕೊರತೆ ಆಲಿಸಿ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಪರಿಹರಿಸಲಾಗುವುದು. ಅಧಿಕಾರಿಗಳಿಂದ ಪ್ರಗತಿ ಕುರಿತ ಮಾಹಿತಿ ಪಡೆದುಕೊಂಡಿದ್ದೇನೆ’ ಎಂದು ವಿವರಿಸಿದರು.

ಕೋವಿಡ್ ಪರೀಕ್ಷೆ: ‘ಜಿಲ್ಲೆಯಲ್ಲಿ 6 ಅಲ್ಪಸಂಖ್ಯಾತರ ವಸತಿ ಶಾಲೆಗಳಿದ್ದು, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಜಾಗೃತಿ ಮೂಡಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಕೋವಿಡ್ ಪರೀಕ್ಷೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 4 ಮೌಲಾನ ಆಜಾದ್ ಮಾದರಿ ಶಾಲೆಗಳಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ 162 ಅಲ್ಪಸಂಖ್ಯಾತ ಅಂಗನವಾಡಿ ಕೇಂದ್ರಗಳು, 163 ಸರ್ಕಾರಿ ಉರ್ದು ಶಾಲೆಗಳು ಹಾಗೂ 5 ಅನುದಾನಿತ ಉರ್ದು ಶಾಲೆಗಳಿವೆ’ ಎಂದು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಮೆಹಬೂಬ್ ಸಾಬ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಕೆಜಿಎಫ್‌ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್, ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು