ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ ಲೋಕಸಭಾ ಕ್ಷೇತ್ರ | ಬಣ ರಾಜಕೀಯ; ಮತ್ತೆ ಕಾಂಗ್ರೆಸ್‌ಗೆ ಕುತ್ತು?

ಮಿತಿಮೀರಿದ ಗುಂಪುಗಾರಿಕೆ–ಕೋಲಾರ ಕ್ಷೇತ್ರದ ಲೋಕಸಭೆ ಟಿಕೆಟ್‌ ವಿಚಾರವೂ ಕಿತ್ತಾಟಕ್ಕೆ ಕಾರಣ
Published 14 ಫೆಬ್ರುವರಿ 2024, 7:12 IST
Last Updated 14 ಫೆಬ್ರುವರಿ 2024, 7:12 IST
ಅಕ್ಷರ ಗಾತ್ರ

ಕೋಲಾರ: 2019ರ ಚುನಾವಣೆಯಲ್ಲಿ ಪ್ರಮುಖವಾಗಿ ಬಣ ರಾಜಕೀಯದಿಂದಲೇ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್‌ಗೆ ಮತ್ತೆ ಅದೇ ಬಣ ರಾಜಕೀಯ ಕುತ್ತಾಗಿ ಪರಿಣಮಿಸುವ ಸಾಧ್ಯತೆ ಇದೆ.

ವರ್ಷಗಳಿಂದ ಪಕ್ಷದಲ್ಲಿನ ಆಂತರಿಕ ಭಿನ್ನಮತ, ಗುಂಪುಗಾರಿಕೆ ತೀವ್ರಗೊಳ್ಳುತ್ತಲೇ ಇದ್ದು, ಪದೇಪದೇ ಬೀದಿಗೆ ಬರುತ್ತಿದೆ. ಇದು ಕಾರ್ಯಕರ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ನಾಯಕರೇ ಕಿತ್ತಾಡಿಕೊಳ್ಳುತ್ತಾ ಕುಳಿತರೆ ಕಾರ್ಯಕರ್ತರ ಪಾಡೇನು ಎಂಬ ಪ್ರಶ್ನೆಯು ಎದ್ದಿದೆ.

ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವಾಗ ಕಾಂಗ್ರೆಸ್‌ ಮುಖಂಡರ ನಡುವೆ ಮಾರಾಮಾರಿ ನಡೆದಿರುವುದು ಪಕ್ಷದ ಕಾರ್ಯಕರ್ತರನ್ನು ಮತ್ತಷ್ಟು ಗೊಂದಲಕ್ಕೆ ಸಿ‌ಲುಕಿಸಿದೆ.

ಕಳೆದ ಲೋಕಸಭೆ ಚುನಾವಣೆಯಿಂದ ಹಲವಾರು ಬಾರಿ ಕಿತ್ತಾಟ, ಹೊಡೆದಾಟ ನಡೆಯುತ್ತಲೇ ಇದ್ದರೂ ಪಕ್ಷದ ಹೈಕಮಾಂಡ್‌, ರಾಜ್ಯಮಟ್ಟದ ವರಿಷ್ಠರು ಮೌನವಾಗಿರುವುದಕ್ಕೆ ತಳಮಟ್ಟದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನಸಭೆ ಚುನಾವಣೆಗೆ ಮುನ್ನ ಸಭೆಗಳಲ್ಲಿ ಮುನಿಯಪ್ಪ ಸಮ್ಮುಖದಲ್ಲೇ ಮುಖಂಡರು ಜಗಳವಾಡುತ್ತಿದ್ದರು. ವಿಧಾನಸಭೆ ಚುನಾವಣೆ ವೇಳೆ ಕೊತ್ತೂರು ಮಂಜುನಾಥ್‌ ಅವರಿಗೆ ಟಿಕೆಟ್‌ ಘೋಷಣೆ ಮಾಡಿದಾಗಲೂ ಕಾಂಗ್ರೆಸ್‌ ಭವನದಲ್ಲಿ ಕುರ್ಚಿಗಳು ಮುರಿದು ಹೋಗುವಷ್ಟರ ಮಟ್ಟಿಗೆ ಹೊಡೆದಾಡಿಕೊಂಡಿದ್ದರು.

ನಂತರದ ದಿನಗಳಲ್ಲಿ ಘಟಬಂಧನ್‌ (ಕೆ.ಆರ್‌.ರಮೇಶ್‌ ಕುಮಾರ್‌ ಬಣ) ಒಂದು ದಿಕ್ಕಿಗೆ ಸಾಗಿದರೆ, ಕೆ.ಎಚ್.ಮುನಿಯಪ್ಪ ಬಣದವರ ಮತ್ತೊಂದು ದಿಕ್ಕಿನತ್ತ ಮುಖ ಮಾಡಿದ್ದರು. ಪ್ರತಿಭಟನೆಗಳು, ಪಕ್ಷದ ಕಾರ್ಯಕ್ರಮಗಳಲ್ಲಿ ಪರಸ್ಪರ ಜೊತೆಗೂಡಿದ್ದು ಅಪರೂಪ. ರಾಹುಲ್‌ ಗಾಂಧಿ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಬಂದಾಗ ಮಾತ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಒಂದೇ ವೇದಿಕೆ ಹಂಚಿಕೊಳ್ಳುತ್ತಿಲ್ಲ.

ಘಟಬಂಧನ್‌ ಕಾರ್ಯಕ್ರಮಗಳಿಗೆ ಮುನಿಯಪ್ಪ ಬೆಂಬಲಿಗರು ಬರುವುದಿಲ್ಲ, ಮುನಿಯಪ್ಪ ಬೆಂಬಲಿಗರ ಕಾರ್ಯಕ್ರಮಗಳಲ್ಲಿ ಘಟಬಂಧನ್‌ ಮುಖಂಡರು ಕಾಣಿಸಿಕೊಳ್ಳುತ್ತಿಲ್ಲ.

ಲೋಕಸಭೆ ಚುನಾವಣೆಗೆ ತಮ್ಮ ಅಭ್ಯರ್ಥಿ ಸಿದ್ಧವಾಗಿದ್ದಾರೆ ಎಂಬುದಾಗಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹೇಳುತ್ತಿರುವುದು ಮುನಿಯಪ್ಪ ಬೆಂಬಲಿಗರ ಕೋಪ ನೆತ್ತಿಗೇರುವಂತೆ ಮಾಡಿದೆ.

ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದಿದ್ದ ಮುನಿಯಪ್ಪ ಅವರನ್ನೇ ಅಭ್ಯರ್ಥಿಯಾಗಿಸಬೇಕೆಂದು ಪದೇದೇ ಒತ್ತಾಯಿಸುತ್ತಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ ಹಾಗೂ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌ ಮುಂಚೂಣಿಯಲ್ಲಿದ್ದಾರೆ.

ಪ್ರತಿ ಚುನಾವಣೆ ವೇಳೆ ಕಾಂಗ್ರೆಸ್‌ನ ಬಣಗಳದ್ದು ಅದೇ ರಾಗ ಅದೇ ಹಾಡು ಎಂಬಂತಾಗಿದ್ದು, ಕಾರ್ಯಕರ್ತರ ಮಾತ್ರ ಅತಂತ್ರರಾಗಿದ್ದಾರೆ.

ಈ ಜಗಳವನ್ನು ವರದಾನವಾಗಿ ಮಾಡಿಕೊಳ್ಳಲು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟಕ್ಕೆ ಯೋಜನೆ ರೂಪಿಸುತ್ತಿದೆ. 2019ರಲ್ಲಿ ಬಿಜೆಪಿಯ ಎಸ್‌.ಮುನಿಸ್ವಾಮಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಮುನಿಸ್ವಾಮಿ ಅವರನ್ನು ಮಣಿಸಿದ್ದರು. ಘಟಬಂಧನ್‌ನ ಹಲವರು ಬಹಿರಂಗವಾಗಿ ಮುನಿಸ್ವಾಮಿ ಅವರನ್ನು ಬೆಂಬಲಿಸಿದ್ದರು.

ಹೀಗಾಗಿ, ಕಾಂಗ್ರೆಸ್‌ನಲ್ಲಿ ಯಾವುದೇ ಬಣಕ್ಕೆ ಟಿಕೆಟ್‌ ಸಿಕ್ಕರೂ ಮತ್ತೊಂದು ಬಣ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

ಊರಬಾಗಿಲು ಶ್ರೀನಿವಾಸ್‌
ಊರಬಾಗಿಲು ಶ್ರೀನಿವಾಸ್‌
ಎಂ.ಎಲ್‌.ಅನಿಲ್‌ಕುಮಾರ್‌
ಎಂ.ಎಲ್‌.ಅನಿಲ್‌ಕುಮಾರ್‌

ಬೂದಿಮುಚ್ಚಿದ ಕೆಂಡದಂತಿದ್ದ ವಿಚಾರ ಮತ್ತೆ ಸ್ಫೋಟ ಪ್ರತಿ ಚುನಾವಣೆ ವೇಳೆ ಅದೇ ರಾಗ ಅದೇ ಹಾಡು ಅತಂತ್ರರಾದ ಕಾರ್ಯಕರ್ತರು

ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದೆ ಅಷ್ಟೆ. ಶಾಸಕರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ನಮ್ಮ ಗುರಿ ಲೋಕಸಭೆ ಚುನಾವಣೆ ಗೆಲ್ಲುವುದು
ಸಿ.ಲಕ್ಷ್ಮಿನಾರಾಯಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೋಲಾರ
ಪದೇಪದೇ ಒಂದು ಗುಂಪು ನಮ್ಮನ್ನು ಟಾರ್ಗೆಟ್‌ ಮಾಡುತ್ತಿದೆ. ಪಕ್ಷದ ವರಿಷ್ಠರು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಈ ಬಾರಿಯೂ ಕ್ಷೇತ್ರ ಕಳೆದುಕೊಳ್ಳುತ್ತೇವೆ
ಊರುಬಾಗಿಲು ಶ್ರೀನಿವಾಸ್‌ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮುನಿಯಪ್ಪ ಆಪ್ತ
ಯಾವುದೇ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್‌ ಪಕ್ಷ ಗೆದ್ದೇ ಗೆಲ್ಲುತ್ತದೆ. ಹೈಕಮಾಂಡ್‌ ಯಾರಿಗೇ ಟಿಕೆಟ್‌ ನೀಡಿದರೂ ಕಾಂಗ್ರೆಸ್‌ ಪಕ್ಷ ಗೆಲ್ಲಿಸುತ್ತೇವೆ
ಅಂಬರೀಶ್‌ ನಗರಸಭೆ ಸದಸ್ಯ ಕೊತ್ತೂರು ಮಂಜುನಾಥ್‌ ಬೆಂಬಲಿಗ

‘ಘಟನೆಗೆ ಜಿಲ್ಲಾ ಅಧ್ಯಕ್ಷ ಕಾರ್ಯಾಧ್ಯಕ್ಷರೇ ಹೊಣೆ’ ಹಲ್ಲೆ ಮಾಡಿ ರಾಜಕಾರಣ ನಡೆಸುವ ದರ್ದು ನಮಗಿಲ್ಲ. ಏಕೆ ಹಲ್ಲೆ ನಡೆಯಿತು ಎಂಬುದು ನಮಗೆ ಗೊತ್ತಾಗಿಲ್ಲ. ಇಷ್ಟು ಕೀಳುಮಟ್ಟಕ್ಕೆ ಇಳಿದು ರಾಜಕಾರಣ ಮಾಡಬಾರದಿತ್ತು. ಲೋಕಸಭೆ ಚುನಾವಣೆ ಸನಿಹದಲ್ಲಿ ಈ ರೀತಿ ನಡೆಯಬಾರದಿತ್ತು. ಬ್ಯಾನರ್‌ನಲ್ಲಿ ಕೆ.ಎಚ್‌.ಮುನಿಯಪ್ಪ ಜೊತೆ ಎಲ್ಲಾ ಶಾಸಕರರ ಫೋಟೊ ಇರಬೇಕಿತ್ತು. ಏಕೆ ತಾರತಮ್ಯ ಮಾಡಿದ್ದಾರೆ? ಆಯಾ ಕ್ಷೇತ್ರದ ಶಾಸಕರು ಮಾಜಿ ಶಾಸಕರ ಪಾತ್ರ ಬಹಳಷ್ಟಿದೆ. ಲೋಕಸಭೆ ಚುನಾವಣೆ ನಡೆಸುವುದು ಊರುಬಾಗಿಲು ಶ್ರೀನಿವಾಸ ಒಬ್ಬರೇ ಅಲ್ಲ. ಎಲ್ಲರ ಫೋಟೊ ಇರಬೇಕಿತ್ತು. ಪ್ರಕರಣಕ್ಕೆ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ ಹೊಣೆಯಾಗಬೇಕು –ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT