ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಮತ ಎಣಿಕೆಗೆ ತಯಾರಿ, ತರಬೇತಿ

ಯಾವುದೇ ಲೋಪಕ್ಕೆ ಅವಕಾಶ ನೀಡದಿರಿ: ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ
Published 30 ಮೇ 2024, 14:22 IST
Last Updated 30 ಮೇ 2024, 14:22 IST
ಅಕ್ಷರ ಗಾತ್ರ

ಕೋಲಾರ: ‘ಮತ ಎಣಿಕೆಗೆ ನಿಗದಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ನಿಯಮ ಪಾಲಿಸಿ ಮತ ಎಣಿಕೆ ಕಾರ್ಯ ಯಶಸ್ವಿಗೊಳಿಸಿ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಲೋಕಸಭಾ ಚುನಾವಣೆಯ ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮತ ಎಣಿಕೆ ಜೂನ್ 4ರಂದು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಎಣಿಕೆ ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ತರಬೇತಿ ಪಡೆದು ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕು’ ಎಂದರು.

‘ಅಂದು ಬೆಳಿಗ್ಗೆ 6ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಉಪಾಹಾರ ಮುಗಿಸಿ 7 ಗಂಟೆಯೊಳಗೆ ತಮಗೆ ನಿಗದಿಪಡಿಸಿದ ಮತ ಎಣಿಕೆ ಕೊಠಡಿಯಲ್ಲಿ ಹಾಜರಿರಬೇಕು. ಎಣಿಕೆ ಕೊಠಡಿಯೊಳಗಡೆ ಮೊಬೈಲ್ ನಿಷೇಧಿಸಲಾಗಿದೆ’ ಎಂದು ಹೇಳಿದರು.

‘ಮತ ಎಣಿಕೆ ಪ್ರಾರಂಭವಾಗುವ ಮೊದಲು ವಿವಿ ಪ್ಯಾಟ್ ಆನ್ ಮಾಡುವುದು, ರಿಸಲ್ಟ್ ಬಟನ್ ಪ್ರೆಸ್ ಮಾಡುವುದು ಹಾಗೂ ಅದನ್ನು ಕ್ಲೋಸ್ ಮಾಡುವಾಗ ಬಹು ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆಗೆ ನಿಯೋಜನೆಗೊಂಡ ಏಜೆಂಟರ ಬಳಿ ಶಾಂತವಾಗಿ ವರ್ತಿಸಿ. ಅವರಿಗೆ ಏನಾದರೂ ಸಂಶಯಗಳಿದ್ದರೆ ಅವುಗಳನ್ನು ಪರಿಹರಿಸಿರಿ. ಪ್ರತಿ ಇವಿಎಂ ಗಳಲ್ಲಿ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ಬರೆದುಕೊಳ್ಳಬೇಕು. ಈ ಸಂಬಂಧ ತರಬೇತಿ ಅವಧಿಯಲ್ಲಿ ಸ್ಪಷ್ಟವಾದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಿ, ಏಕೆಂದರೆ ಮತ ಎಣಿಕೆ ಮೇಲ್ವಿಚಾರಕರ ಜವಾಬ್ದಾರಿ ಬಹು ಮುಖ್ಯವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ‘ಅಂಚೆ ಮತಪತ್ರ ಎಣಿಕೆಗಾಗಿ ಪ್ರತ್ಯೇಕ ಕೊಠಡಿ ಹಾಗೂ 4 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಸರ್ವಿಸ್ ವೋಟ್‍ಗಳನ್ನು (ಇ.ಟಿ.ಪಿ.ಬಿ.ಎಸ್) ಚುನಾವಣಾಧಿಕಾರಿ ಸಮ್ಮುಖದಲ್ಲಿ ತಂತ್ರಾಂಶದಲ್ಲಿ ಮತ ಎಣಿಕೆ ಮಾಡಲಾಗುವುದು. ವಿಧಾನಸಭೆ ಕ್ಷೇತ್ರವಾರು ಐದು ಮತಗಟ್ಟೆಗಳ ವಿ.ವಿ ಪ್ಯಾಟ್‍ಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ಅಭ್ಯರ್ಥಿಗಳ, ಏಜೆಂಟರ ಸಮಕ್ಷಮದಲ್ಲಿ ವಿ.ವಿ.ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಗುವುದು’ ಎಂದರು.

‘ಅನವಶ್ಯಕವಾಗಿ ತಮ್ಮ ಎಣಿಕೆ ಟೇಬಲ್ ಬಿಟ್ಟು ಎಣಿಕೆ ಸ್ಥಳಗಳಲ್ಲಿ ಓಡಾಡುವಂತಿಲ್ಲ, ಅನಗತ್ಯಗೊಂದಲ ಸೃಷ್ಟಿ ಮಾಡುವಂತಿಲ್ಲ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ್‌, ‘ಸರ್ವೀಸ್ ವೋಟ್‍ಗಳನ್ನು ಕ್ರಮಬದ್ಧವಾಗಿ ಇದ್ದಲ್ಲಿ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಬೇಕು. ಸ್ವಘೋಷಿತ ಪ್ರಮಾಣ ಪತ್ರದಲ್ಲಿ ಮತದಾರರ ಹಾಗೂ ಪತ್ರಾಂಕಿತ ಅಧಿಕಾರಿ ಸಹಿ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು’ ಎಂದರು.

ತರಬೇತಿಗೆ ಬಂದಿದ್ದ ಸಿಬ್ಬಂದಿಗೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನುಸರಿಸಬಹುದಾದ ನಿಯಮಗಳ ಬಗ್ಗೆ ಮಾಸ್ಟರ್ ಟ್ರೇನರ್ ಬೋಡಿರೆಡ್ಡಿ ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎಚ್‌.ಎಚ್‌.ವೆಂಕಟಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್, ಎಲ್ಲಾ ಎಆರ್‌ಓಗಳು, ತಹಶೀಲ್ದಾರ್ ಇದ್ದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿದರು
ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿದರು

ಕೋಲಾರ ಕ್ಷೇತ್ರಕ್ಕೆ ಏ.26ರಂದು ನಡೆದಿದ್ದ ಮತದಾನ ಜೂನ್‌ 4ರಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಎಣಿಕೆ ಕೊಠಡಿಯೊಳಗಡೆ ಮೊಬೈಲ್ ನಿಷೇಧ

ಮತ ಎಣಿಕೆ ಕೊಠಡಿಗೆ ಪೊಲೀಸರು ಭದ್ರತಾ ಸಿಬ್ಬಂದಿಗೆ ಅನವಶ್ಯಕವಾಗಿ ಪ್ರವೇಶವಿರುವುದಿಲ್ಲ. ಅಭ್ಯರ್ಥಿಗಳಲ್ಲದೆ ರಾಜ್ಯ ಸಚಿವರು ಕೇಂದ್ರ ಸಚಿವರಿಗೆ ಪ್ರವೇಶ ಇರುವುದಿಲ್ಲ

-ಅಕ್ರಂ ಪಾಷಾ ಜಿಲ್ಲಾಧಿಕಾರಿ

ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಮತ ಎಣಿಕೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಏಜೆಂಟರಿಗೆ ಮತ ಎಣಿಕೆ ಸಿಬ್ಬಂದಿಗೆ ವಿವಿಧ ಬಣ್ಣಗಳ ಪಾಸ್‍ ವಿತರಿಸಲಾಗಿದೆ

-ಎಂ.ನಾರಾಯಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT