ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು–ಏಜೆನ್ಸಿ ಒಪ್ಪಂದಕ್ಕೆ ಜಿಲ್ಲೆ ಹಾಳು: ಸಂಸದ ಮುನಿಸ್ವಾಮಿ ಗುಡುಗು

Last Updated 14 ಜನವರಿ 2022, 14:05 IST
ಅಕ್ಷರ ಗಾತ್ರ

ಕೋಲಾರ: ‘ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ಏಜೆನ್ಸಿಗಳ ಜತೆ ಒಳ ಒಪ್ಪಂದ ಮಾಡಿಕೊಂಡಿರುವುದೇ ಜಿಲ್ಲೆ ಹಾಳಾಗುವುದಕ್ಕೆ ಮುಖ್ಯ ಕಾರಣ’ ಎಂದು ಸಂಸದ ಎಸ್‌.ಮುನಿಸ್ವಾಮಿ ಗುಡುಗಿದರು.

ಸಂಸದರ ಆದರ್ಶ ಗ್ರಾಮ ಯೋಜನೆ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಸರ್ಕಾರದ ಯೋಜನೆಗಳ ಅನುಷ್ಠಾನ ಸಂಬಂಧ ಚರ್ಚಿಸಲು ಸಭೆ ಕರೆದರೆ ಅಧಿಕಾರಿಗಳೇ ಬಂದಿಲ್ಲ. ಅಧಿಕಾರಿಗಳೇ ಇಲ್ಲದೆ ಯಾರ ಜತೆ ಸಭೆ ನಡೆಸುವುದು?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಗಳು ಹೇಳಿದ್ದನ್ನು ಕೇಳಿಕೊಂಡು ಕೆಲಸ ಮಾಡಿಕೊಂಡು ಹೋಗುವುದಷ್ಟೇ ಅಧಿಕಾರಿಗಳ ಜವಾಬ್ದಾರಿಯಲ್ಲ. ಇಲಾಖೆ ವ್ಯಾಪ್ತಿಯ ಆಚೆಗೆ ಜನಪರವಾಗಿ ಕೆಲಸ ಮಾಡಿ. ಇದು ಸಾಧ್ಯವಾಗದಿದ್ದರೆ ಜಿಲ್ಲೆಯಿಂದ ಜಾಗ ಖಾಲಿ ಮಾಡಿ’ ಎಂದು ತಾಕೀತು ಮಾಡಿದರು.

‘ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಸ್ಮಾರಕ ನಿರ್ಮಾಣಕ್ಕೆ ಜಮೀನು ಮತ್ತು ₹ 2 ಕೋಟಿ ಅನುದಾನ ನೀಡಲಾಗಿದೆ. ಆದರೆ, ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿರುವವರು ಇನ್ನೂ ಕೆಲಸ ಆರಂಭಿಸಿಲ್ಲ. ಅಧಿಕಾರಿ ವರ್ಗ ಜಡ್ಡುಗಟ್ಟಿದೆ. ಸಭೆಗೆ ಗೈರಾಗಿರುವ ಅಧಿಕಾರಿಗಳನ್ನು ತಕ್ಷಣವೇ ಕರೆಸಿ’ ಎಂದು ಸೂಚಿಸಿದರು.

‘ಪ್ರತಿ ಇಲಾಖೆಗೆ ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬರುತ್ತದೆ. ಮೊದಲು ಸಂಸದರ ಆದರ್ಶ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿ. ಕೆರೆ, ಕಾಲುವೆ, ಸರ್ಕಾರಿ ಜಾಗ ಹಾಗೂ ಸ್ಮಶಾನ ಜಾಗದ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಿ. ಗ್ರಾಮ ಪಂಚಾಯಿತಿ, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ ಜಾಗಗಳಿಗೆ ಇ–ಸ್ವತ್ತು ನೀಡುವುದಕ್ಕೂ ಮೊದಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಆದೇಶಿಸಿದರು.

ಒತ್ತುವರಿ ತೆರವುಗೊಳಿಸಿ: ‘ಅರ್ಜಿದಾರರು ಅರ್ಜಿಸಿ ಸಲ್ಲಿಸಿ ಹಣ ಕೊಟ್ಟ ಮಾತ್ರಕ್ಕೆ ಇ–ಸ್ವತ್ತು ನೀಡಬಾರದು. ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಲಂಚ ಪಡೆದು ಸರ್ಕಾರಿ ಜಾಗಕ್ಕೆ ಒಪ್ಪಿಗೆ ಮೇರೆಗೆ ಇ–ಸ್ವತ್ತು ಕೊಟ್ಟಿದ್ದಾರೆ. ಕೋಟಿಲಿಂಗ ದೇವಾಲಯದ ಸರ್ಕಾರಿ ಜಾಗವನ್ನು ಕಬಳಿಸಲಾಗಿದ್ದು, ಈ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಬೇಕು’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಆದರ್ಶ ಗ್ರಾಮ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ ಸರ್ಕಾರಿ ವೈದ್ಯರನ್ನು ನಿಯೋಜಿಸಿ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಕ್ಯಾಸಂಬಳಿಯಲ್ಲಿ ನೂತನ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ‘ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಾ ಸರ್ಕಾರದಿಂದ ಪೂರೈಕೆಯಾದ ಔಷಧ ಮಾತ್ರೆಗಳನ್ನು ಮಾರಾಟ ಮಾಡಿ ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ್ದಾರೆ. ಈ ಬಗ್ಗೆ ಸಾಕಷ್ಟು ದೂರು ಬಂದಿದ್ದು, ಆ ವೈದ್ಯರ ಮೇಲೆ ನಿಗಾ ವಹಿಸಿ’ ಎಂದು ತಿಳಿಸಿದರು.

ಕೌಶಲ ತರಬೇತಿ: ‘ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡಲು ಪೂರಕ ಕೌಶಲ ತರಬೇತಿ ನೀಡಬೇಕು. ಆದಾಯೋತ್ಪನ್ನ ಚಟುವಟಿಕೆ ನಡೆಸಲು ತರಬೇತಿ ನೀಡಿದರೆ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಮುದ್ರಾ ಮತ್ತು ಕಾಯಕ ಯೋಜನೆಯಿಂದ ಹೆಚ್ಚಿನ ಸಾಲ ನೀಡಲಾಗುತ್ತದೆ. ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸಂಸದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಸುಮಾರು 500 ಶಾಲಾ ಕಟ್ಟಡಗಳು ಸೋರುತ್ತಿದ್ದು, ಇವುಗಳ ದುರಸ್ತಿ ಆಗಬೇಕು. ಆರ್ಥಿಕ ಸ್ಥಿತಿವಂತರು ಮತ್ತು ಗುತ್ತಿಗೆದಾರರಿಂದ ಹಣಕಾಸು ನೆರವು ಪಡೆದು ಶಾಲಾ ಕಟ್ಟಡಗಳನ್ನು ಅಭಿವೃದ್ಧಿಪಡಿಸಿ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿ’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್, ಉಪಕಾರ್ಯದರ್ಶಿ ಸಂಜೀವಪ್ಪ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT