ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌, ಕೆಎಎಸ್‌ನಲ್ಲಿ ಕೋಲಾರವೇ ಮೊದಲಿರಬೇಕು: ಅಕ್ರಂ ಪಾಷ

Published 15 ಜುಲೈ 2023, 15:24 IST
Last Updated 15 ಜುಲೈ 2023, 15:24 IST
ಅಕ್ಷರ ಗಾತ್ರ

ಕೋಲಾರ: ‘ಕೆಎಎಸ್ ಎಂದರೆ ಕೋಲಾರ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಎಂಬುದು ಜಿಲ್ಲೆಗೆ ಅನ್ವರ್ಥನಾಮವಾಗಿತ್ತು. ವಿವಿಧ ಇಲಾಖೆಗಳಲ್ಲಿ ಜಿಲ್ಲೆಯವರೇ ಹೆಚ್ಚಿನ ಅಧಿಕಾರಿಗಳು ಇದ್ದರು. ಈಗ ಕೋಲಾರದಿಂದ ಆಯ್ಕೆಯಾಗುವ ಐಎಎಸ್, ಕೆಎಎಸ್ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಆತಂಕ ವ್ಯಕ್ತಪಡಿಸಿದರು.

ವಿಶ್ವ ಯುವ ಕೌಶಲ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ ಇಲಾಖೆ ಹಾಗೂ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಐಎಎಸ್‌, ಕೆಎಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗತಕಾಲದ ವೈಭವವನ್ನು ಮತ್ತೆ ಮರುಸ್ಥಾಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೋಲಾರ ಜಿಲ್ಲೆ ಮತ್ತೆ ಮುಂಚೂಣಿ ಸ್ಥಾನ ಪಡೆಯಬೇಕು. ಆ ಕನಸನ್ನು ನೀವೆಲ್ಲರೂ ನನಸು ಮಾಡಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಿ ಸ್ಫೂರ್ತಿ ತುಂಬಲಿದ್ದೇವೆ’ ಎಂದರು.

‘ನಾವು ಓದುವಾಗ ನಮಗೆ ಯಾರೂ ಅರಿವು ಮೂಡಿಸಿಲ್ಲ. ಇಂಥ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಮೊಬೈಲ್, ಆನ್‌ಲೈನ್ ಇರಲಿಲ್ಲ. ಯಾವುದೇ ಸೌಲಭ್ಯ ಇರಲಿಲ್ಲ. ಓದಲು ಇದ್ದದ್ದು ಸರ್ಕಾರಿ ಗ್ರಂಥಾಲಯ ಮಾತ್ರ. ಆದರೆ,‌ ನೀವು ಅದೃಷ್ಟವಂತರು. ಮಾಹಿತಿ ತಂತ್ರಜ್ಞಾನದಿಂದಾಗಿ ಕುಳಿತಲ್ಲಿಯೇ ಮಾಹಿತಿ ಸಿಗುತ್ತದೆ’ ಎಂದು ಹೇಳಿದರು.

ರೀಕ್ಷೆಗೂ ಮೀರಿ ಸ್ಪರ್ಧಾ ಆಕಾಂಕ್ಷಿಗಳು ಪಾಲ್ಗೊಂಡಿದ್ದು ಖುಷಿ ನೀಡಿದೆ. ಮತ್ತಷ್ಟು ಇಂಥ ಕಾರ್ಯಕ್ರಮ ಆಯೋಜನೆಗೆ ಪ್ರೇರಣೆ ತುಂಬಿದೆ. ಕಾರ್ಯಾಗಾರದ ಸದುಪಯೋಗ ಆಗಬೇಕು
ಅಕ್ರಂ ಪಾಷ, ಜಿಲ್ಲಾಧಿಕಾರಿ

‘ಇದು ಸ್ಪರ್ಧಾತ್ಮಕ ಯುಗ. ಮ್ಯಾರಥಾನ್ ಓಟದಲ್ಲಿ ಸಾವಿರಾರು ಮಂದಿ ಸ್ಪರ್ಧಿಗಳಿರುತ್ತಾರೆ. ಅವರ ನಡುವೆ ಸ್ಪರ್ಧಿಸಿ ಗೆಲ್ಲಬೇಕು. ಬದ್ಧತೆ, ಪರಿಶ್ರಮ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ಒಂದು ಪ್ರಯತ್ನದಲ್ಲಿ ಉತ್ತೀರ್ಣರಾಗದೇ ಇರಬಹುದು. ಸತತ ಪ್ರಯತ್ನದಿಂದ ಸಾಧನೆ ಮಾಡಬಹುದು. ಬಡವರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಪರಿಶಿಷ್ಟರಿಗೆ, ಕಾರ್ಮಿಕರಿಗೆ ಸರ್ಕಾರದ ಇಲಾಖೆಗಳಿಂದ ಆರ್ಥಿಕ ಸಹಾಯ ಸಿಗುತ್ತಿದೆ’ ಎಂದರು.

‘ಇದು ದಾರಿ ತೋರಿಸುವ ಕಾರ್ಯಕ್ರಮ. ಮುಂದೆ ಓಡುವವರು ನೀವು. ಕನಸು ಕಾಣಬೇಕು, ದೃಢ ನಿರ್ಧಾರ, ಛಲ ಇರಬೇಕು. ಗುರಿ ಇದ್ದರೆ ದಾರಿ ಸುಗಮವಾಗಲಿದೆ’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, 'ಕನ್ನಡದಲ್ಲೂ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶವಿದೆ. ವಿಷಯ ಅರ್ಥ ಮಾಡಿಕೊಂಡು ಪರೀಕ್ಷೆಗೆ ಸಿದ್ಧವಾಗಬೇಕು. ಬಹಳ ಸ್ಪರ್ಧೆ ಇದ್ದು, ಶ್ರದ್ಧೆಯಿಂದ ಓದಬೇಕು. ಜೊತೆಗೆ ಧ್ಯಾನವೂ ಸಹಕಾರಿ. ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು. ಹೇಗೆ ಓದಬೇಕು, ಯಾವುದನ್ನು ಓದಬೇಕು ಎಂಬುದನ್ನು ಅರಿಯಲು ಕೋಚಿಂಗ್ ಅಗತ್ಯವಿದೆ’ ಎಂದರು.

ಐಎಎಸ್ ಅಧಿಕಾರಿ ಎನ್.ಎಂ.ನಾಗರಾಜ್, ‘ಸ್ವಂತವಾಗಿ ಓದಿ ಮುಂದೆ ಬರುವವರೇ ಶೇ 50 ಮಂದಿ ಇದ್ದಾರೆ. ಇವರಿಗೆ ಗ್ರಂಥಾಲಯವೇ ಮೂಲ. ಹೀಗಾಗಿ, ಗ್ರಂಥಾಲಯವನ್ನು ಡಿಜಲಿಟೀಕರಣ ಮಾಡಬೇಕು’ ಎಂದು ಸಲಹೆ ನೀಡಿದರು.

ಉತ್ತರ ಭಾರತದಲ್ಲಿ 8ನೇ ತರಗತಿಯಲ್ಲೇ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸುತ್ತಾರೆ‌. ನಮ್ಮಲ್ಲಿ ಪದವಿಗೆ ಬಂದಾಗ ಸಿದ್ಧತೆ ಆರಂಭವಾಗುತ್ತದೆ. ಸಿದ್ಧತೆ ಬೇಗ ಆರಂಭಿಸಿ ಪರಿಶ್ರಮ ಹಾಕಿ
ಪದ್ಮಾ ಬಸವಂತಪ್ಪ, ಸಿಇಒ, ಜಿಲ್ಲಾ ಪಂಚಾಯಿತಿ

‘ಜ್ಞಾನ ಹಾಗೂ ಕೌಶಲ ಕೊರತೆಯಿಂದ ಉದ್ಯೋಗ ಸಿಗುತ್ತಿಲ್ಲ. ಕೆಲಸ ಕೊಡುವವರು ಬೇಡಿಕೆಗೆ ತಕ್ಕ ಕೌಶಲ ನೋಡುತ್ತಾರೆ. ಇದೇ ಕಾರಣಕ್ಕೆ ಕೌಶಲ ಇಲಾಖೆ ಆರಂಭಿಸಲಾಗಿದೆ. ಕೌಶಲಕ್ಕೆ ಒತ್ತು ನೀಡಬೇಕಿದೆ. ನಿತ್ಯ ಪ್ರಜಾವಾಣಿ ದಿನಪತ್ರಿಕೆ ಓದಿ’ ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಾಧಿಕಾರಿ ವಿ.ಏಡುಕೊಂಡಲು, 'ಬದ್ಧತೆ ಇದ್ದರೆ ಯಶಸ್ಸು ಸಾಧ್ಯ. ಸರಿಯಾದ ವಿಷಯ ಓದಬೇಕು. ನಿತ್ಯ ದಿನಪತ್ರಿಕೆ ಓದಬೇಕು. ಸಂಪಾದಕೀಯ ಓದಬೇಕು. ನೋಟ್ಸ್ ಸಿದ್ಧತೆ ಮಾಡಿಕೊಳ್ಳಬೇಕು. ಒತ್ತಡಕ್ಕೆ ಒಳಗಾಗಬೇಡಿ’ ಎಂದು ಸಲಹೆ ನೀಡಿದರು.

ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ಶ್ರೀನಿವಾಸ್ ಪ್ರಸ್ತಾವಿಕವಾಗಿ ಮಾತನಾಡಿ, '2014ರಿಂದ ಯುವ ಕೌಶಲ ದಿನಾಚರಣೆ ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ 25 ವರ್ಷದೊಳಗಿನವರು ಶೇ 50ರಷ್ಟು ಮಂದಿ ಇದ್ದಾರೆ. ಕೌಶಲ ನೀಡಿದರೆ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ರೂಪಿಸಬಹುದು. ನಮ್ಮಲ್ಲಿ ಕೌಶಲ ಕೊರತೆ ಇದೆ. ಉದ್ಯೋಗಕ್ಕೆ ಕೌಶಲ ಹೊಂದಿರುವ ಅರ್ಹರು ಸಿಗುತ್ತಿಲ್ಲ. ಹೀಗಾಗಿ, ಕೌಶಲ ಬೆಳೆಸಿಕೊಳ್ಳುವುದು ಅಗತ್ಯ. ಈ ಕಾರ್ಯಕ್ರಮ ತಮ್ಮ ಭವಿಷ್ಯ ರೂಪಿಸಲಿದೆ' ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋನಿಯಾ ವರ್ಣೇಕರ್‌, ತಹಶೀಲ್ದಾರ್‌ಗಳಾದ ಹರ್ಷವರ್ಧನ್, ರಶ್ಮಿ, ಡಿಡಿಪಿಯು ರಾಮಚಂದ್ರಪ್ಪ, ಸಂಪನ್ಮೂಲ ವ್ಯಕ್ತಿಗಳಾದ ನವೀನ್, ಪ್ರಭುಲಿಂಗ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಕಿಕ್ಕಿರಿದು ಸೇರಿದ ವಿದ್ಯಾರ್ಥಿಗಳು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಆಕಾಂಕ್ಷಿಗಳು ಕಿಕ್ಕಿರಿದು ಸೇರಿದ್ದರು. ನೋಂದಣಿ ಮಾಡಿಕೊಂಡವರೇ 800 ಮಂದಿ ಇದ್ದರು. ನೋಂದಣಿ ಮಾಡದೆ ಬಂದವರೂ ಇದ್ದರು. ಹೀಗಾಗಿ ಸುಮಾರು ಸಾವಿರ ಮಂದಿ ಪಾಲ್ಗೊಂಡಿದ್ದರು. ಶಿಕ್ಷಕರು ಪೋಷಕರೂ ಬಂದಿದ್ದರು. ಸಭಾಂಗಣದ ಆಸನ ವ್ಯವಸ್ಥೆ ಸಾಲದೆ ಹೆಚ್ಚಿನ ಕುರ್ಚಿ ಹಾಕಲಾಯಿತು. ಇನ್ನು ಕೆಲವರು ಮೆಟ್ಟಿಲು ಮೇಲೆ ಮುಖ್ಯ ಮಾರ್ಗದ ಹಾದಿಯಲ್ಲಿ ಕುಳಿತರು. ಎಲ್ಲರಿಗೂ ಮಧ್ಯಾಹ್ನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು. ಪರೀಕ್ಷೆಗಳ ಪಠ್ಯಕ್ರಮ ತಯಾರಿ ಪರೀಕ್ಷಾ ಹಂತಗಳು ಎದುರಿಸುವ ರೀತಿ ಮುಂತಾದ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ನಾನೂ ಗ್ರಾಮೀಣ ಪ್ರದೇಶದವನು

‘ನೀವೂ ಐಎಎಸ್ ಐಪಿಎಸ್ ಎಎಫ್‌ಎಸ್‌ ಕೆಎಎಸ್ ಅಧಿಕಾರಿಯಾಗಹುದು. ಈ ಕಾರ್ಯಾಗಾರವೇ ತಮ್ಮ ಪಾಲಿನ ಮೊದಲ ಹೆಜ್ಜೆ. ಇಂಗ್ಲಿಷ್ ಬರಲ್ಲ ಎಂಬ ಕೀಳರಿಮೆ ಬೇಡ. ಬಡವರು ರೈತರು ಮಧ್ಯಮ ವರ್ಗದವರು ಹಣವಿಲ್ಲವೆಂದು ಧೃತಿ ಗೆಡುವ ಅವಶ್ಯ ಇಲ್ಲ. ಹಾಗೇ ನೋಡಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮುಂಚೂಣಿಯಲ್ಲಿದ್ದಾರೆ. ನಾನೂ ಗ್ರಾಮೀಣ ಪ್ರದೇಶದವನು. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೊನೆಯ ಹಳ್ಳಿಯವನು. ತಂದೆ ಚಾಲಕ. ಕುಟುಂಬದ ಯಾರೂ ಸ್ನಾತಕೋತ್ತರ ಪದವಿ ಮಾಡಿರಲಿಲ್ಲ. ಅಂಥ ಕುಟುಂಬದಿಂದ ಬಂದವನು ಈಗ ನಿಮ್ಮೆದುರು ಜಿಲ್ಲಾಧಿಕಾರಿಯಾಗಿ ನಿಂತಿದ್ದೇನೆ’ ಎಂದು ಅಕ್ರಂ ಪಾಷ ಹೇಳಿದರು.

ಬಡತನವಿದ್ದಲ್ಲಿ ಛಲ

‘ಎಲ್ಲಿ ಬಡತನ ಇರುತ್ತೋ ಅಲ್ಲಿ ಛಲ ಹೆಚ್ಚು. ಏಕೆಂದರೆ ಬದುಕುವ ದಾರಿ ಕಂಡುಕೊಳ್ಳಬೇಕು‌‌‌. ಯುಪಿಎಸ್‌ಸಿ ಕೆಎಎಸ್‌ ಪರೀಕ್ಷೆ ಕೂಡ ರೇಸ್ ಇದ್ದಂತೆ. ಈ ರೇಸ್‌ನಲ್ಲಿ ಯಾರೂ ಬೇಕಾದರೂ ಗೆಲ್ಲಬಹುದು. ಅದಕ್ಕೆ ಬಡವ ಶ್ರೀಮಂತ ಜಾತಿ ಧರ್ಮದ ಗಡಿ ಇಲ್ಲ. ಪ್ರಯತ್ನವೊಂದೇ ಸಾಧನೆ ಕಡೆ ಕರೆದೊಯ್ಯಲಿದೆ. ಪ್ರೌಢಶಾಲೆ ಹಂತದಿಂದಲೇ ಸ್ಪರ್ಧಾತ್ಮಕ ಮನೋಭಾವ ಬೆಳೆಯಬೇಕು’ ಎಂದು ಐಎಎಸ್‌ ಅಧಿಕಾರಿ ಎನ್‌.ಎಂ.ನಾಗರಾಜ್‌ ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಪರೀಕ್ಷಾ ಆಕಾಂಕ್ಷಿಗಳು
ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಪರೀಕ್ಷಾ ಆಕಾಂಕ್ಷಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT