ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ದತ್ತು ನೀಡಿದ ಮಗು ಮರಳಿ ಕೇಳಿದ ತಾಯಿ! ಪ್ರಕರಣ ನಾಟಕೀಯ ತಿರುವು

ಮಗು ಮಾರಾಟ ಪ್ರಕರಣಕ್ಕೆ ಹೊಸ ತಿರುವು l ಹಣ ಪಡೆದು ದತ್ತು ನೀಡಿದ ಆರೋಪ l ಮತ್ತಷ್ಟು ಜಟಿಲ
Published 14 ಮೇ 2024, 19:50 IST
Last Updated 15 ಮೇ 2024, 3:36 IST
ಅಕ್ಷರ ಗಾತ್ರ

ಬಂಗಾರಪೇಟೆ (ಕೋಲಾರ): ಹಣಕ್ಕಾಗಿ ಪತಿಯು ಮಾರಾಟ ಮಾಡಿದ್ದ ಮಗುವನ್ನು ಮರಳಿ ನೀಡುವಂತೆ ಮಗುವಿನ ತಾಯಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ದಂಪತಿ ಸಮ್ಮತಿಯ ಮೇರೆಗೆ ಮಗುವನ್ನು ದತ್ತು ನೀಡಿರುವ ವಿಷಯ ವಿಚಾರಣೆ ವೇಳೆ ಬಹಿರಂಗವಾಗಿದ್ದು, ಇಡೀ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ.  

‘ಸಾಲ ತೀರಿಸುವ ನೆಪದಲ್ಲಿ ಪತಿ ಎಸ್‌.ಎ.ಮುನಿರಾಜು ನನಗೆ ಗೊತ್ತಿಲ್ಲದೇ ಮಗುವನ್ನು ಹಣಕ್ಕೆ ಮಾರಾಟ ಮಾಡಿದ್ದಾರೆ’ ಎಂದು ಪಟ್ಟಣದ ಕೆರೆಕೋಡಿ ವಾರ್ಡ್‌ನ ಕೆ.ಪವಿತ್ರಾ ಎಂಬ ಮಹಿಳೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೊರೆ ಹೋಗಿದ್ದರು. ಈ ಸಂಬಂಧ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ನಾಗರತ್ನಾ ಭಾನುವಾರ ಬಂಗಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ, ಮಗುವನ್ನು ದತ್ತು ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ದತ್ತು ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ ಎಂದು ತಿಳಿದು ಬಂದಿದೆ.

ಮಗುವನ್ನು ದತ್ತು ನೀಡಿದ ದಂಪತಿ ಮತ್ತು ದತ್ತು ಪಡೆದ ದಂಪತಿ ಹಾಗೂ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ದತ್ತು ಪಡೆದವರು ಮಗು ಸಮೇತ ‘ದತ್ತು ಸ್ವೀಕಾರ ಪತ್ರ’ದೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ದೂರಿನಲ್ಲಿ ಏನಿದೆ?: ಕೆರೆಕೋಡಿ ವಾರ್ಡ್‌ನ ಪವಿತ್ರಾ ಅವರ ಎರಡನೇ ಗಂಡು ಮಗುವನ್ನು ಆಕೆಯ ಪತಿ ಮುನಿರಾಜು ಹಾಗೂ ಅದೇ ವಾರ್ಡ್‌ ನಿವಾಸಿ ವಲ್ಲಿ ಎಂಬ ಮಹಿಳೆ ಸೇರಿ ಅಪರಿಚಿತರಿಗೆ ಮಾರಾಟ ಮಾಡಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಂಡು ಮಗುವನ್ನು ತಾಯಿಗೆ ವಾಪಸ್‌ ಕೊಡಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಪವಿತ್ರಾ ಅವರನ್ನು ಕರೆದು ತನಿಖೆಗೆ ಒಳಪಡಿಸಿದ್ದಾರೆ. ಆಗ ಅವರು ನಡೆದ ಘಟನೆ ವಿವರಿಸಿದ್ದಾರೆ.

ದತ್ತು ಸ್ವೀಕಾರ ಪತ್ರ: ಮುನಿರಾಜು ಹಾಗೂ ಪವಿತ್ರಾ ಅವರ ಮೂರು ತಿಂಗಳ ಮಗುವನ್ನು ತಾಲ್ಲೂಕಿನವರೇ ಆದ ಹೆನ್ರಿ ಜೋಸೆಫ್‌ ಹಾಗೂ ಎನ್‌.ಭುವನೇಶ್ವರಿ ಎಂಬುವರಿಗೆ ದತ್ತು ನೀಡಿರುವ ‘ದತ್ತು ಸ್ವೀಕಾರ ಪತ್ರ’ವನ್ನು ಬಂಗಾರಪೇಟೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2023ರ ಆಗಸ್ಟ್‌ 16ರಂದು ನೋಂದಾಯಿಸಲಾಗಿದೆ.

ಅದರಲ್ಲಿ ಮುನಿರಾಜು ಹಾಗೂ ಪವಿತ್ರಾ ಅವರ ಫೋಟೊ, ಹೆಬ್ಬೆಟ್ಟು ಗುರುತು ಹಾಗೂ ಸಹಿಯೂ ಇದೆ. ಸಾಕ್ಷಿಗಳ ಸಮೇತ ದತ್ತು ಪಡೆದವರ ವಿವರವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT