ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಮುಲ್‌ ವಿಭಜನೆ: ಶೀಘ್ರ ನಿರ್ಧರಿಸಲಿ

ಅನಗತ್ಯ ಗೊಂದಲ ಸೃಷ್ಟಿ: ನಿರ್ದೇಶಕ ಹರೀಶ್ ಅಸಮಾಧಾನ
Last Updated 9 ಸೆಪ್ಟೆಂಬರ್ 2021, 14:21 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಿಭಜನೆ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗಿದೆ. ಸರ್ಕಾರ ಒಕ್ಕೂಟ ವಿಭಜಿಸುವುದಾದರೆ ವಿಳಂಬ ಧೋರಣೆ ಬಿಟ್ಟು ಶೀಘ್ರವೇ ನಿರ್ಧಾರ ಕೈಗೊಳ್ಳಲಿ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್ ಒತ್ತಾಯಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಚಿಮುಲ್ ವಿಭಜನೆ ಬಗ್ಗೆ 2016ರಿಂದಲೂ ನಿರಂತರ ಚರ್ಚೆಯಾಗುತ್ತಿದೆ. ಒಕ್ಕೂಟದ ಹಿಂದಿನ ಆಡಳಿತ ಮಂಡಳಿ ಸಭೆ, ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆಯಾಗಿ ವಿಭಜನೆಗೆ ಸಹಮತ ವ್ಯಕ್ತವಾಗಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳು ಬೇಸರ ಮೂಡಿಸಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಒಕ್ಕೂಟದ ವಿಭಜನೆಗೆ ವೈಯಕ್ತಿಕವಾಗಿ ನನ್ನ ಅಭ್ಯಂತರವಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ₹ 200 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ಆರಂಭಿಸುವಾಗ ಒಕ್ಕೂಟದ ಆಡಳಿತ ಮಂಡಳಿ ಚಿಕ್ಕಬಳ್ಳಾಪುರವನ್ನು ಕಡೆಗಣಿಸಲಿಲ್ಲ. ಆದರೆ, ಕೋಲಾರ ಜಿಲ್ಲೆಯಲ್ಲಿ ₹ 130 ಕೋಟಿ ವೆಚ್ಚದಲ್ಲಿ ಎಂವಿಕೆ ಡೇರಿ ಸ್ಥಾಪನೆಗೆ ಟೆಂಡರ್ ಕರೆಯುವಾಗ ಸರ್ಕಾರ ಕೋಚಿಮುಲ್ ವಿಭಜನೆಯ ಕಾರಣ ಮುಂದಿಟ್ಟುಕೊಂಡು ತಡೆ ನೀಡಿತ್ತು’ ಎಂದು ವಿವರಿಸಿದರು.

‘ಶಾಸಕ ರಮೇಶ್‌ಕುಮಾರ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತಂದ ಮೇಲೆ ಕೋಲಾರ ಜಿಲ್ಲೆಯಲ್ಲಿ ಎಂವಿಕೆ ಡೇರಿ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಶಿಫಾರಸಿನಂತೆ ₹ 185 ಕೋಟಿ ಅಂದಾಜು ವೆಚ್ಚದ 10 ಲಕ್ಷ ಲೀಟರ್ ಸಾಮರ್ಥ್ಯದ ಡೇರಿ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಸರ್ಕಾರ ಅನುಮೋದನೆ ನೀಡುತ್ತಿಲ್ಲ’ ಎಂದು ದೂರಿದರು.

‘ಕೋಚಿಮುಲ್‌ನಲ್ಲಿ ಸದ್ಯ 350 ಮಂದಿ ಕಾಯಂ, 1,400 ಮಂದಿ ದಿನಗೂಲಿ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಯಂ ಸಿಬ್ಬಂದಿ ಇದ್ದರೆ ಉತ್ಪನ್ನಗಳ ಗುಣಮಟ್ಟ ಕಾಯ್ದಕೊಳ್ಳುವುದು ಸಾಧ್ಯ. ಈ ಕಾರಣಕ್ಕೆ 160 ಮಂದಿಯ ನೇಮಕಾತಿಗೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸರ್ಕಾರ ತಡೆ ನೀಡಿದೆ’ ಎಂದು ಆರೋಪಿಸಿದರು.

₹ 33 ಕೋಟಿ ನಷ್ಟ: ‘ಕೋವಿಡ್‌ ಕಾರಣಕ್ಕೆ ಒಕ್ಕೂಟಕ್ಕೆ ಆಗಸ್ಟ್‌ವರೆಗೆ ₹ 33 ಕೋಟಿ ನಷ್ಟವಾಗಿದೆ. ₹ 50 ಕೋಟಿ ಮೌಲ್ಯದ ಹಾಲಿನ ಉತ್ಪನ್ನಗಳು ಮಾರಾಟವಾಗದೆ ಉಳಿದಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಒಕ್ಕೂಟ ವಿಭಜನೆ ಮಾಡುವುದಾದರೆ ಕೋಲಾರ ಜಿಲ್ಲೆಯ ಎಲ್ಲಾ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ವಿಭಜನೆ ಮಾಡಲಿ. ಇಲ್ಲವಾದರೆ ವಿಭಜನೆ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಲು’ ಎಂದರು.

‘ಮೂರ್ನಾಲ್ಕು ವರ್ಷಗಳಿಂದ 6 ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಒಕ್ಕೂಟ ವಿಭಜನೆ ಮಾಡುತ್ತೇವೆ ಎಂದು ಹೇಳುತ್ತಾ ಗೊಂದಲ ಸೃಷ್ಟಿಸುತ್ತಿರುವುದರಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ತಾಂತ್ರಿಕವಾಗಿ ಚರ್ಚಿಸಿ ವೈಜ್ಞಾನಿಕವಾಗಿ ಒಕ್ಕೂಟ ವಿಭಜಿಸಲಿ. ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

‘ಡಿ.ಕೆ.ರವಿ ಅವರು ಜಿಲ್ಲಾಧಿಕಾರಿ ಆಗಿದ್ದಾಗ ಹೊಳಲಿ ಸಮೀಪ ಒಕ್ಕೂಟಕ್ಕೆ 50 ಎಕರೆ ಜಮೀನು ಮಂಜೂರು ಮಾಡಿದ್ದರು. ಅದರಲ್ಲಿ 14 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದ ಸ್ಥಳೀಯರು 4 ಕೊಳವೆ ಬಾವಿ ಕೊರೆಸಿದ್ದರು. ಆ ಒತ್ತುವರಿ ತೆರವುಗೊಳಿಸಲಾಗಿದೆ. ಆ ಜಾಗದಲ್ಲಿ 10 ಕೊಳವೆ ಬಾವಿ ಕೊರೆಸಿ ಪೈಪ್‌ಲೈನ್ ಮೂಲಕ ಒಕ್ಕೂಟದ ಡೇರಿಗೆ ನೀರು ಪೂರೈಸಿದರೆ ಲಕ್ಷಾಂತರ ರೂಪಾಯಿ ಉಳಿತಾಯವಾಗುತ್ತದೆ’ ಎಂದು ಸಲಹೆ ನೀಡಿದರು.

ಕೋಚಿಮುಲ್ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಶಿವರುದ್ರಪ್ಪ, ತಾಲ್ಲೂಕು ಪಂಚಾಯಿಸಿ ಮಾಜಿ ಸದಸ್ಯ ಮುರಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT